ಗೃಹಮಂತ್ರಿ ಜಿ.ಪರಮೇಶ್ವರಗೆ ಲಾಲಿಪಾಪ್ ತೋರಿಸುತ್ತಿದ್ದಾರಾ ಸಿಎಂ ಸಿದ್ದರಾಮಯ್ಯ ?

ಜಿ ಪರಮೇಶ್ವರಗೆ ಸಿದ್ದು ಲಾಲಿಪಾಪ್
ರಾಜ್ಯದ ಗೃಹಮಂತ್ರಿ ಜಿ ಪರಮೇಶ್ವರ ಅವರಲ್ಲಿ ಮುಖ್ಯಮಂತ್ರಿ ಆಗುವ ಆಸೆ ಗರಿಗೆದುರಿದೆ.
ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಲು ಸರ್ವ ರೀತಿಯಲ್ಲೂ ಪ್ರಯತ್ನ ಮಾಡುತ್ತಿರುವ ನಡುವೆ ಪರಮೇಶ್ವರ ಸಿಎಂ ಕುರ್ಚಿ ಮೇಲೆ ಆಸೆಗಣ್ಣು ನೆಟ್ಟಿದ್ದಾರೆ. ಅದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ.
ಒಂದು ವೇಳೆ ಮುಖ್ಯಮಂತ್ರಿ ಬದಲಿಸುವುದಾದರೆ ಡಿಕೆಶಿ ಬದಲಿಗೆ ಬೇರೆಯವರನ್ನು ಮಾಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿಯಬಹುದು.
ಆಗ ತಮ್ಮ ಹೆಸರು ಮುಂಚೂಣಿಗೆ ಬರಬಹುದು ಎಂದು ಪರಮೇಶ್ವರ ನಂಬಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಪರಮೇಶ್ವರ ಅವರಿಗೆ ಭರವಸೆ ನೀಡಿರಬಹುದು.
ಆ ಕಾರಣಕ್ಕೆ ಪರಮೇಶ್ವರ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ.
2013 ರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ ಪರಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯದ ಅಧಿಕಾರದ ಗದ್ದುಗೆ ಹಿಡಿದಿತ್ತು.
ಆಗಲೇ ಅವರು ಮುಖ್ಯಮಂತ್ರಿ ಆಗಬೇಕಿತ್ತು.
ಆದರೆ, ಪರಮೇಶ್ವರ ಚುನಾವಣೆಯಲ್ಲಿ ಸೋತಿದ್ದರಿಂದ ಮುಖ್ಯಮಂತ್ರಿ ರೇಸಿನಿಂದ ಹಿಂದೆ ಸರಿಯುವಂತಾಗಿತ್ತು. ಇದರಿಂದಾಗಿ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಎದುರಾಳಿಗಳಿಲ್ಲದೆ ಮುಖ್ಯಮಂತ್ರಿ ಆಗಿದ್ದರು.
ಕೊರಟಗೆರೆ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಜಿ. ಪರಮೇಶ್ವರ ಸೋಲಿನಲ್ಲಿ ಸಿದ್ದರಾಮಯ್ಯ ಕೈವಾಡ ಇತ್ತೆಂಬ ಮಾತುಗಳು ಕೇಳಿಬಂದಿದ್ದವು.
ಯಾಕೆಂದರೆ ರಾಜಕೀಯವಾಗಿ ಅಷ್ಟೇನೂ ಪ್ರಭಾವಿಯಲ್ಲದ ಜೆಡಿಎಸ್ ಅಭ್ಯರ್ಥಿ ಸುಧಾಕರಲಾಲ್ ವಿರುದ್ಧ ಪರಮೇಶ್ವರ ಸೋತಿದ್ದರು. ಆ ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ಡಿಸಿಎಂ ಆಗಲು ಪರಮೇಶ್ವರ ಹರಸಾಹಸ ಪಡಬೇಕಾಯಿತು. ಗೃಹ ಖಾತೆ ಸಿಕ್ಕರೂ ಅದನ್ನು ಪರಮೇಶ್ವರ ಬದಲಿಗೆ ಆಗ ಗೃಹ ಸಚಿವರ ಆಪ್ತ ಸಲಹೆಗಾರರಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಸಿಎಂ ಸಿದ್ದರಾಮಯ್ಯ ಪರಮಾಪ್ತ ಕೆಂಪಯ್ಯ ನಿಭಾಯಿಸುತ್ತಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.
ಸಿದ್ದರಾಮಯ್ಯ ಅವರಿಂದಾಗಿ ರಾಜಕೀಯವಾಗಿ ಸಾಕಷ್ಟು ಹಿನ್ನಡೆ ಅನುಭವಿಸಿದರೂ ಇದೀಗ ಅದೇ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ ಪರಮೇಶ್ವರ.
ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ ಹಾಗೂ ಶತ್ರುಗಳಲ್ಲ ಎಂಬ ಮಾತಿನಂತೆ ಪರಮೇಶ್ವರ ನಡೆದುಕೊಳ್ಳುತ್ತಿದ್ದಾರೆ. ಯಾಕೆಂದರೆ ರಾಜಕೀಯದಲ್ಲಿ ಅಧಿಕಾರವೇ ಮುಖ್ಯವಾಗುತ್ತದೆ.
ಒಂದು ವೇಳೆ ಮುಖ್ಯಮಂತ್ರಿ ಬದಲಿಸುವುದಾದರೆ ಸಿದ್ದರಾಮಯ್ಯ ಬಲಗೈ ಬಂಟನಂತಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗಿಂತ ಪರಮೇಶ್ವರ ಹೆಸರು ಮುಂಚೂಣಿಗೆ ಬರುವ ಸಾಧ್ಯತೆ ಇದೆ.
ಜಾರಕಿಹೊಳಿ ಕೂಡ ಈಗ ನಾನು ಮುಖ್ಯಮಂತ್ರಿ ರೇಸಿನಲ್ಲಿಲ್ಲ. 2028 ರ ಚುನಾವಣೆ ಬಳಿಕ ನಾನು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಮಂತ್ರಿ ಪರಮೇಶ್ವರ ಅವರ ಹೆಸರು ಮುಂದಿಟ್ಟುಕೊಂಡು ಡಿಸಿಎಂ ಡಿ ಕೆ ಶಿವಕುಮಾರ ಅವರಿಗೆ ಚೆಕ್ ನೀಡುತ್ತಿದ್ದಾರೆ.
ಪರಮೇಶ್ವರ ಮುಖ್ಯಮಂತ್ರಿಯಾದರೆ ದಲಿತರೊಬ್ಬರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಸಿಕ್ಕಂತಾಗುತ್ತದೆ. ಅದರ ಶ್ರೇಯಸ್ಸು ಸಿದ್ದರಾಮಯ್ಯ ಅವರಿಗೆ ಸಿಕ್ಕಂತಾಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಡಿ ಕೆ ಶಿವಕುಮಾರ ಅವರಿಗೆ ಕಾಂಗ್ರೆಸ್ ನಲ್ಲಿ ಪರ್ಯಾಯ ಎಂಬುದು ಏನಾದರೂ ಇದ್ದರೆ ಅದು ಜಿ ಪರಮೇಶ್ವರ ಮಾತ್ರ.
ಇದರಿಂದಾಗಿ, ಪರಮೇಶ್ವರ ಹೆಸರು ಮುನ್ನೆಲೆಗೆ ತರುತ್ತಾ ಸಿದ್ದರಾಮಯ್ಯ ಅಧಿಕಾರಾವಧಿ ಪೂರೈಸುವ ಎಲ್ಲ ಸಾಧ್ಯತೆಗಳಿವೆ.

