ಡಿಸಿಎಂ ಡಿ ಕೆ ಶಿವಕುಮಾರ್ ಸಿಎಂ ಆಗುವ ಕಥೆ ಏನಾಯಿತು..?

ತಾರೀಕ್ ಪೆ ತಾರೀಕ್, ತಾರೀಕ್ ಪೆ ತಾರೀಕ್, ಮಿಲ್ ರಹಿ ಹೈ ಲೇಕಿನ್, ಇನ್ಸಾಫ್ ನಹಿ ಮಿಲಾ…
1993 ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ‌ ದಾಮಿನಿಯಲ್ಲಿ ನಟ ಸನ್ನಿ ಡಿಯೋಲ್ ಕೋರ್ಟ್ ಸನ್ನಿವೇಶದಲ್ಲಿ ಹೇಳುವ ಡೈಲಾಗ್‌ನಂತೆ ಆಗಿದೆ ಡಿಸಿಎಂ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಕಥೆ.
ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರ ಬೆಂಬಲಿಗ
ರಾಮನಗರ ಶಾಸಕ ಇಕ್ಬಾಲ್ ಹುಸೇನ್  ಹೇಳುತ್ತಲೇ ಇದ್ದಾರೆ. ಇಕ್ಬಾಲ್ ಹುಸೇನ್ ಒಂದು ರೀತಿಯಲ್ಲಿ ಡಿ ಕೆ ಶಿವಕುಮಾರ್ ಅವರ ಭವಿಷ್ಯಕಾರರಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸುವ ಮುನ್ನ ಈ ಕುರಿತು ಭವಿಷ್ಯ ಹೇಳಲು ಶುರುವಿಟ್ಟುಕೊಂಡಿದ್ದ ಇಕ್ಬಾಲ್ ಹುಸೇನ್
ಆ ಬಳಿಕ ಜನವರಿ 6 ರಂದು ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದ್ದರು.
6 ಹಾಗೂ 9 ಡಿ ಕೆ ಶಿವಕುಮಾರ್ ಅವರ ಅದೃಷ್ಟ ಸಂಖ್ಯೆ ಎಂದು ಕೂಡ ಇಕ್ಬಾಲ್ ಹುಸೇನ್ ಹೇಳಿದ್ದರು.
ಆದರೆ, ಶಾಸಕ ಇಕ್ಬಾಲ್ ಹುಸೇನ್ ಭವಿಷ್ಯವಾಣಿ ಹುಸಿಯಾಗಿತ್ತು. ಮೇ 15 ಜನ್ಮದಿನದಂದು ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಶಾಸಕ ಇಕ್ಬಾಲ್ ಹುಸೇನ್ ಮತ್ತೊಂದು ದಿನಾಂಕ ನಿಗದಿಪಡಿಸಿದ್ದರು. ಆದರೆ
ಶಾಸಕ ಇಕ್ಬಾಲ್ ಹುಸೇನ್ ಭವಿಷ್ಯವಾಣಿ ಮತ್ತೊಮ್ಮೆ ಹುಸಿಯಾಗಿದೆ. ಎರಡೂವರೆ ವರ್ಷ ಅಧಿಕಾರದ ಒಪ್ಪಂದವಾಗಿತ್ತು ಎಂದು ಡಿ ಕೆ ಶಿವಕುಮಾರ್ ಪರೋಕ್ಷವಾಗಿ ಎಷ್ಟೇ ಸಲ ಹೇಳಿದರೂ ಇದೀಗ ಸಿದ್ದರಾಮಯ್ಯ ಸರ್ಕಾರ ಮೂರು ವರ್ಷದ ಅಧಿಕಾರ ಪೂರೈಸಿದೆ.
ಮೇಲಾಗಿ ಡಿ ಕೆ ಶಿವಕುಮಾರ್ ತಂತ್ರಕ್ಕೆ ಸಿದ್ದರಾಮಯ್ಯ ಪ್ರತಿತಂತ್ರ ಹೆಣೆಯುತ್ತಲೇ ಇದ್ದಾರೆ. ಅಧಿಕಾರ ಬಿಟ್ಟುಕೊಡಲೇಬೇಕಾದ ಸಂದರ್ಭ ಬಂದರೆ ಡಿ ಕೆ ಶಿವಕುಮಾರ್ ಬದಲಿಗೆ ಬೇರೊಬ್ಬರು ಅಂದರೆ ತಾವು ಹೇಳಿದವರು ಮುಖ್ಯಮಂತ್ರಿ ಆಗಲಿ ಎಂಬುದು ಸಿದ್ದರಾಮಯ್ಯ ಪಟ್ಟು ಆಗಿದೆ.
ಅಧಿಕಾರ ಸಿಗದಿದ್ದರೆ ಡಿ ಕೆ ಶಿವಕುಮಾರ್ ಸುಮ್ಮನೆ ಇರಬಹುದೇನೋ.? ಆದರೆ ಸಿಎಂ ಸಿದ್ದರಾಮಯ್ಯ ಸುಮ್ಮನಿರುವವರಲ್ಲ.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಆಡಿದ ಆಟ ನೆನಪಿಸಿಕೊಂಡರೆ ಸಾಕು ತಿಳಿಯುತ್ತದೆ ರಾಜಕೀಯ ಎತ್ತ ಸಾಗಲಿದೆ ಎಂದು.

ಗೃಹಮಂತ್ರಿ ಜಿ.ಪರಮೇಶ್ವರಗೆ ಲಾಲಿಪಾಪ್ ತೋರಿಸುತ್ತಿದ್ದಾರಾ ಸಿಎಂ ಸಿದ್ದರಾಮಯ್ಯ ?

ಜಿ ಪರಮೇಶ್ವರಗೆ ಸಿದ್ದು ಲಾಲಿಪಾಪ್

ರಾಜ್ಯದ ಗೃಹಮಂತ್ರಿ ಜಿ ಪರಮೇಶ್ವರ ಅವರಲ್ಲಿ ಮುಖ್ಯಮಂತ್ರಿ ಆಗುವ ಆಸೆ ಗರಿಗೆದುರಿದೆ.
ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಲು ಸರ್ವ ರೀತಿಯಲ್ಲೂ ಪ್ರಯತ್ನ ಮಾಡುತ್ತಿರುವ ನಡುವೆ ಪರಮೇಶ್ವರ ಸಿಎಂ ಕುರ್ಚಿ ಮೇಲೆ ಆಸೆಗಣ್ಣು ನೆಟ್ಟಿದ್ದಾರೆ. ಅದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ.
ಒಂದು ವೇಳೆ ಮುಖ್ಯಮಂತ್ರಿ ಬದಲಿಸುವುದಾದರೆ ಡಿಕೆಶಿ ಬದಲಿಗೆ ಬೇರೆಯವರನ್ನು ಮಾಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿಯಬಹುದು.
ಆಗ ತಮ್ಮ ಹೆಸರು ಮುಂಚೂಣಿಗೆ ಬರಬಹುದು ಎಂದು ಪರಮೇಶ್ವರ ನಂಬಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಪರಮೇಶ್ವರ ಅವರಿಗೆ ಭರವಸೆ ನೀಡಿರಬಹುದು.
ಆ‌ ಕಾರಣಕ್ಕೆ‌ ಪರಮೇಶ್ವರ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ.
2013 ರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ ಪರಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯದ ಅಧಿಕಾರದ ಗದ್ದುಗೆ ಹಿಡಿದಿತ್ತು.
ಆಗಲೇ ಅವರು ಮುಖ್ಯಮಂತ್ರಿ ಆಗಬೇಕಿತ್ತು.
ಆದರೆ, ಪರಮೇಶ್ವರ ಚುನಾವಣೆಯಲ್ಲಿ ಸೋತಿದ್ದರಿಂದ ಮುಖ್ಯಮಂತ್ರಿ ರೇಸಿನಿಂದ ಹಿಂದೆ ಸರಿಯುವಂತಾಗಿತ್ತು. ಇದರಿಂದಾಗಿ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಎದುರಾಳಿಗಳಿಲ್ಲದೆ ಮುಖ್ಯಮಂತ್ರಿ ಆಗಿದ್ದರು.
ಕೊರಟಗೆರೆ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಜಿ. ಪರಮೇಶ್ವರ ಸೋಲಿನಲ್ಲಿ ಸಿದ್ದರಾಮಯ್ಯ ಕೈವಾಡ ಇತ್ತೆಂಬ ಮಾತುಗಳು ಕೇಳಿಬಂದಿದ್ದವು.
ಯಾಕೆಂದರೆ ರಾಜಕೀಯವಾಗಿ ಅಷ್ಟೇನೂ ಪ್ರಭಾವಿಯಲ್ಲದ ಜೆಡಿಎಸ್ ಅಭ್ಯರ್ಥಿ ಸುಧಾಕರಲಾಲ್ ವಿರುದ್ಧ ಪರಮೇಶ್ವರ ಸೋತಿದ್ದರು. ಆ ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ಡಿಸಿಎಂ ಆಗಲು ಪರಮೇಶ್ವರ ಹರಸಾಹಸ ಪಡಬೇಕಾಯಿತು. ಗೃಹ ಖಾತೆ ಸಿಕ್ಕರೂ ಅದನ್ನು ಪರಮೇಶ್ವರ ಬದಲಿಗೆ ಆಗ ಗೃಹ ಸಚಿವರ ಆಪ್ತ ಸಲಹೆಗಾರರಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಸಿಎಂ‌ ಸಿದ್ದರಾಮಯ್ಯ ಪರಮಾಪ್ತ ಕೆಂಪಯ್ಯ ನಿಭಾಯಿಸುತ್ತಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.
ಸಿದ್ದರಾಮಯ್ಯ ಅವರಿಂದಾಗಿ ರಾಜಕೀಯವಾಗಿ ಸಾಕಷ್ಟು ಹಿನ್ನಡೆ ಅನುಭವಿಸಿದರೂ ಇದೀಗ ಅದೇ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ ಪರಮೇಶ್ವರ.
ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ ಹಾಗೂ ಶತ್ರುಗಳಲ್ಲ ಎಂಬ ಮಾತಿನಂತೆ ಪರಮೇಶ್ವರ ನಡೆದುಕೊಳ್ಳುತ್ತಿದ್ದಾರೆ. ಯಾಕೆಂದರೆ ರಾಜಕೀಯದಲ್ಲಿ ಅಧಿಕಾರವೇ ಮುಖ್ಯವಾಗುತ್ತದೆ.
ಒಂದು ವೇಳೆ ಮುಖ್ಯಮಂತ್ರಿ ಬದಲಿಸುವುದಾದರೆ ಸಿದ್ದರಾಮಯ್ಯ ಬಲಗೈ ಬಂಟನಂತಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗಿಂತ ಪರಮೇಶ್ವರ ಹೆಸರು ಮುಂಚೂಣಿಗೆ ಬರುವ ಸಾಧ್ಯತೆ ಇದೆ.
ಜಾರಕಿಹೊಳಿ ಕೂಡ ಈಗ ನಾನು ಮುಖ್ಯಮಂತ್ರಿ ರೇಸಿನಲ್ಲಿಲ್ಲ. 2028 ರ ಚುನಾವಣೆ ಬಳಿಕ ನಾನು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಮಂತ್ರಿ ಪರಮೇಶ್ವರ ಅವರ ಹೆಸರು ಮುಂದಿಟ್ಟುಕೊಂಡು ಡಿಸಿಎಂ ಡಿ ಕೆ ಶಿವಕುಮಾರ ಅವರಿಗೆ ಚೆಕ್ ನೀಡುತ್ತಿದ್ದಾರೆ.
ಪರಮೇಶ್ವರ ಮುಖ್ಯಮಂತ್ರಿಯಾದರೆ ದಲಿತರೊಬ್ಬರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ಸಿಕ್ಕಂತಾಗುತ್ತದೆ‌. ಅದರ ಶ್ರೇಯಸ್ಸು ಸಿದ್ದರಾಮಯ್ಯ ಅವರಿಗೆ ಸಿಕ್ಕಂತಾಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಡಿ ಕೆ ಶಿವಕುಮಾರ ಅವರಿಗೆ ಕಾಂಗ್ರೆಸ್ ನಲ್ಲಿ ಪರ್ಯಾಯ ಎಂಬುದು ಏನಾದರೂ ಇದ್ದರೆ ಅದು ಜಿ ಪರಮೇಶ್ವರ ಮಾತ್ರ.
ಇದರಿಂದಾಗಿ, ಪರಮೇಶ್ವರ ಹೆಸರು ಮುನ್ನೆಲೆಗೆ ತರುತ್ತಾ‌ ಸಿದ್ದರಾಮಯ್ಯ ಅಧಿಕಾರಾವಧಿ ಪೂರೈಸುವ ಎಲ್ಲ ಸಾಧ್ಯತೆಗಳಿವೆ‌.

ಟಿಎಂಸಿಯ ಎಕ್ಕ ಈಗ ಪಶ್ಚಿಮ ಬಂಗಾಳ ಬಿಜೆಪಿಯ ರಾಜ

ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದಿದೆ.‌ ಬಿಜೆಪಿ ಗೆಲುವಿನಲ್ಲಿ ಪಕ್ಷದ ರಣತಂತ್ರ,
ಟಿಎಂಸಿ ವಿರುದ್ಧ ಹೋರಾಟ, ಆರ್‌ ಎಸ್ ಎಸ್ ಸಂಘಟನೆ, ಹಿಂದುತ್ವ ಏನೇ ಕಾರಣಗಳಿರಬಹುದು
ಈಗ ಮುಖ್ಯಮಂತ್ರಿಯಾಗಿರುವ ಸುವೇಂದು ಅಧಿಕಾರಿ ಪಾತ್ರ ಕೂಡ ಅಷ್ಟೇ ಪ್ರಮುಖವಾಗಿದೆ.

ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ನಲ್ಲಿ ಪ್ರಮುಖ ಹಾಗೂ ಪ್ರಬಲ  ನಾಯಕರಾಗಿದ್ದ ಸುವೇಂದು ಅಧಿಕಾರಿ ಅವರನ್ನು ಬಿಜೆಪಿ 2020 ರಲ್ಲಿ ಪಕ್ಷಕ್ಕೆ ಸೆಳೆದು ಮಮತಾ ಬ್ಯಾನರ್ಜಿಗೆ ಚೆಕ್ ನೀಡಿತ್ತು. ಅದಕ್ಕೂ ಮುನ್ನ ಬಿಜೆಪಿ, ತೃಣಮೂಲ ಕಾಂಗ್ರೆಸ್ ನ ಅನೇಕ ನಾಯಕರನ್ನು ಪಕ್ಷಕ್ಕೆ ಸೆಳೆದಿದ್ದರೂ ಅವರು ಬಿಜೆಪಿ ನಿರೀಕ್ಷೆ ಸಾಬೀತುಪಡಿಸಿರಲಿಲ್ಲ. ಆದರೆ, ಸುವೇಂದು ಅಧಿಕಾರಿ ಪ್ರಾಬಲ್ಯ 2021 ರ ವಿಧಾನಸಭಾ ಚುನಾವಣೆಯಲ್ಲೇ ಸಾಬೀತಾಗಿತ್ತು.

ನಂದಿಗ್ರಾಮ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಮಮತಾ ಬ್ಯಾನರ್ಜಿಯನ್ನು ಸೋಲಿಸುವ ಮೂಲಕ ಬಿಜೆಪಿಯಲ್ಲಿ ಅಧಿಕಾರದ ಭರವಸೆ ಮೂಡಿಸಿದ್ದರು. ಇದೀಗ ಭವಾನಿಪುರದಲ್ಲೂ ಮಮತಾ‌ ಬ್ಯಾನರ್ಜಿಯನ್ನು ಸೋಲಿಸುವ ಮೂಲಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ತಮ್ಮ ಪ್ರಾಬಲ್ಯ ಏನೆಂಬುದನ್ನು ಸಾಬೀತುಪಡಿಸಿದ್ದಾರೆ.ಬಭವಾನಿಪುರದೊಂದಿಗೆ ಇಡೀ ಬಂಗಾಳದಲ್ಲಿ  ತೃಣಮೂಲ ಕಾಂಗ್ರೆಸ್ ಗೆ ಸುವೇಂದು ಅಧಿಕಾರಿ ಸೋಲಿನ ರುಚಿ ತೋರಿಸಿದ್ದಾರೆ.

ಇನ್ನು ಸುವೇಂದು ಅಧಿಕಾರಿ ಸಂಪುಟದಲ್ಲಿ ಮಂತ್ರಿಯಾಗಿರುವ ನಿಶಿತ್ ಪ್ರಾಮಾಣಿಕ್ ಕೂಡ ಟಿಎಂಸಿಯಲ್ಲಿದ್ದವರು. ಕೇಂದ್ರ ಸರ್ಕಾರದಲ್ಲಿ ಗೃಹ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ರಾಜ್ಯ ಸಚಿವರಾಗಿದ್ದ ಇವರು 2019 ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

 

ಬಳ್ಳಾರಿ ಬಿಜೆಪಿಯಲ್ಲಿ ಮತ್ತೆ ಜನಾರ್ಧನ ರೆಡ್ಡಿ ಹವಾ

ಬಳ್ಳಾರಿ: ಗಾಲಿ ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ. ಕೇಂದ್ರ ಗೃಹಸಚಿವ ಅಮಿತ್ ಷಾ 2018 ರ ವಿಧಾನಸಭಾ ಚುನಾವಣೆಗೂ ಮುನ್ನ ಈ ಮಾತು ಹೇಳಿದ್ದರು. ಈ ಮೂಲಕ ಜನಾರ್ಧನ ರೆಡ್ಡಿ ಬಿಜೆಪಿ ಮರು ಸೇರ್ಪಡೆ ಆಸೆಯನ್ನು ಅಮಿತ್ ಷಾ ಭಗ್ನಗೊಳಿಸಿದ್ದರು.
2023 ರ ಚುನಾವಣೆಯಲ್ಲೂ ಜನಾರ್ಧನ ರೆಡ್ಡಿ ಬಿಜೆಪಿ ಸೇರ್ಪಡೆ ಆಸೆ ಕೈಗೂಡಿರಲಿಲ್ಲ. ಆಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಂದರೆ ಕೆಆರ್‌ಪಿಪಿ ಸ್ಥಾಪಿಸಿ ಚುನಾವಣೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವ‌ ಮೂಲಕ ವೈಯಕ್ತಿಕ ವರ್ಚಸ್ಸು ಸಾಬೀತುಪಡಿಸಿದ್ದರು.
ಇದರೊಂದಿಗೆ ಬಳ್ಳಾರಿ ಜಿಲ್ಲೆಯಲ್ಲಿ ಕೆಲ ಬಿಜೆಪಿ ಅಭ್ಯರ್ಥಿಗಳ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಗಾಲಿ ಜನಾರ್ಧನ ರೆಡ್ಡಿ ಬಿಜೆಪಿ ಸೇರ್ಪಡೆ ಹಾದಿಯನ್ನು ಸುಗಮಗೊಳಿಸಿಕೊಂಡಿದ್ದರು.
ಆಗ ಬಿಜೆಪಿಗೆ ಬೇಕಾಗಿರದಿದ್ದ ಜನಾರ್ಧನರೆಡ್ಡಿ ಹಿಡಿತದಲ್ಲೇ ಇದೀಗ ಬಳ್ಳಾರಿ ಜಿಲ್ಲೆಯ ಬಿಜೆಪಿ ಇದೆ. ಬಿಜೆಪಿ ಪದಾಧಿಕಾರಿಗಳ ನೇಮಕದಲ್ಲಿ ಜನಾರ್ಧನ ರೆಡ್ಡಿ ಮಾತೇ ಅಂತಿಮವಾಗಿದೆ
ಇದರಿಂದಾಗಿ ನಗರ ಘಟಕ, ಒಬಿಸಿ, ಎಸ್ಟಿ,
ಮಹಿಳಾ ಮೋರ್ಚಾ ಸೇರಿದಂತೆ ಪಕ್ಷದಲ್ಲಿ ಜನಾರ್ಧನ ರೆಡ್ಡಿ ಬೆಂಬಲಿಗರು ಅಂದರೆ ಕೆಆರ್‌ಪಿಪಿಯಲ್ಲಿದ್ದವರೇ ಪ್ರಾಬಲ್ಯ ಸಾಧಿಸಿದ್ದಾರೆ.
ಇದರಿಂದಾಗಿ ಬಿಜೆಪಿಯ ಬಹುತೇಕ ಮೂಲ ಕಾರ್ಯಕರ್ತರು ಮೂಲೆ ಗುಂಪಾಗಿದ್ದಾರೆ.
ಪದಾಧಿಕಾರಿಗಳ ನೇಮಕದಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಬೆಂಬಲಿಗರಿಗೂ ಸ್ಥಾನ ಸಿಕ್ಕಿಲ್ಲವಂತೆ. ಅಷ್ಟರ ಮಟ್ಟಿಗೆ ಬಳ್ಳಾರಿ ಬಿಜೆಪಿ ರಾಜಕೀಯದಲ್ಲಿ ಬಿ ಶ್ರೀರಾಮುಲು ಸೈಲೆಂಟ್ ಆಗಿದ್ದಾರೆ. ಜಾತಿ ಬಲದ ಕಾರಣಕ್ಕೆ ಬಿಜೆಪಿಯಲ್ಲಿ ಶ್ರೀರಾಮುಲು ಜನಾರ್ಧನ ರೆಡ್ಡಿ ಅವರಿಗಿಂತ ಬಲಿಷ್ಠ ನಾಯಕರೇ ಆಗಿರಬಹುದು. ಆದರೆ, 2023 ರ ವಿಧಾನಸಭೆ ಹಾಗೂ 2024 ರ ಲೋಕಸಭೆ ಚುನಾವಣೆ ಸೋಲು ಶ್ರೀರಾಮುಲು ಅವರನ್ನು ಅಷ್ಟರ ಮಟ್ಟಿಗೆ ಹತಾಶರನ್ನಾಗಿ ಮಾಡಿದೆ. ಜನಾರ್ಧನ ರೆಡ್ಡಿ ಅವರ ವಿರೋಧ ಕಟ್ಟಿಕೊಂಡರೆ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ ಎಂಬುದು ಶ್ರೀರಾಮುಲು ಅವರಿಗೆ ಮನವರಿಕೆ ಆದಂತಿದೆ.
ಇರಲಿ ಈ ಇಬ್ಬರು ಸ್ನೇಹಿತರ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಬಳ್ಳಾರಿ ಜಿಲ್ಲೆಯ ಬಿಜೆಪಿ ಪರಿಸ್ಥಿತಿ ಬಗ್ಗೆ ನೋಡೋಣ. ಬಳ್ಳಾರಿ ಜಿಲ್ಲೆಯ ಬಿಜೆಪಿ ಇದೀಗ ಸಂಪೂರ್ಣವಾಗಿ ಮಾಜಿ ಮಂತ್ರಿ
ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ವಶದಲ್ಲಿದೆ. 2004 ರಿಂದ 2011ರವರೆಗೆ ಇದ್ದ ಪರಿಸ್ಥಿತಿ ಬಳ್ಳಾರಿ ಜಿಲ್ಲೆಯ ಬಿಜೆಪಿಯಲ್ಲಿ ಮರುಕಳಿಸಿದೆ. ನಾವು ಕೂಡ ಜನಾರ್ಧನ ರೆಡ್ಡಿ ಸ್ಥಾಪಿಸಿದ್ದ ಕೆಆರ್‌ಪಿಪಿ ಸೇರಿದ್ದರೆ ಚೆನ್ನಾಗಿತ್ತು ಎಂದು ಪಕ್ಷದ ಮೂಲ ಕಾರ್ಯಕರ್ತರು ಹೇಳುವಷ್ಟರ ಮಟ್ಟಿಗೆ ಬಳ್ಳಾರಿ ಬಿಜೆಪಿ ಜನಾರ್ಧನ ರೆಡ್ಡಿ ಹಿಡಿತದಲ್ಲಿದೆ. ಅಲ್ಲಿಗೆ ಬಿಜೆಪಿ ರಾಜ್ಯ ಹಾಗೂ ಕೇಂದ್ರದ ಪ್ರಮುಖರು ಕೂಡ ಜನಾರ್ಧನ ರೆಡ್ಡಿ ಅವರಿಗೆ ಶರಣಾಗಿದ್ದಾರೆ. ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ  ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಅದಕ್ಕಾಗಿ ಗೆಲ್ಲುವ ಅಥವಾ ಗೆಲ್ಲಿಸುವ ಕುದುರೆಗಳ ಮೇಲೆ ಪಕ್ಷದ ನಾಯಕರು ಕಣ್ಣಿಟ್ಟಿದ್ದಾರೆ. ಈ ಪೈಕಿ ಜನಾರ್ಧನ ರೆಡ್ಡಿ ಒಬ್ಬರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ.
ಬಳ್ಳಾರಿ ನಗರ, ಗ್ರಾಮೀಣ ಹಾಗೂ ಕಂಪ್ಲಿ ಕ್ಷೇತ್ರದಲ್ಲಿ ಬಿಜೆಪಿ ಸೋಲಿನಲ್ಲಿ ಜನಾರ್ಧನ ರೆಡ್ಡಿ ಅವರ ರಾಜಕೀಯ ನಡೆ ಪ್ರಮುಖ ಪಾತ್ರ ವಹಿಸಿತ್ತು. ಸಂಡೂರಿನಲ್ಲಿ ಬಿಜೆಪಿಗೆ ಇದುವರೆಗೆ ಗೆಲ್ಲಲು ಸಾಧ್ಯವಾಗಿಲ್ಲ. ಸಿರಗುಪ್ಪದಲ್ಲಿ ಮಾಜಿ ಶಾಸಕ ಸೋಮಲಿಂಗಪ್ಪ ವೈಯಕ್ತಿಕ ವರ್ಚಸ್ಸಿನಿಂದ ಗೆಲ್ಲುತ್ತಾ ಬಂದಿದ್ದಾರೆ.
ಇದರಿಂದಾಗಿ ಸಿರಗುಪ್ಪ ಹೊರತುಪಡಿಸಿದರೂ ಇನ್ನುಳಿದ ನಾಲ್ಕು ಕ್ಷೇತ್ರಗಳ ಗೆಲುವಿನ ಹೊಣೆಗಾರಿಕೆ ಬಿಜೆಪಿ ಜನಾರ್ಧನ ರೆಡ್ಡಿ ಹೆಗಲಿಗೆ ಹಾಕುವ ನಿರೀಕ್ಷೆಗಳಿವೆ. ಅದಕ್ಕಾಗಿ ಬಿಜೆಪಿ ಈಗಲೇ ಜನಾರ್ಧನ ರೆಡ್ಡಿಗೆ ಶರಣು ಎಂದು ಹೇಳಿರುವಂತಿದೆ.

ಮಹಿಳೆಯರು ಗುರಿ ಇಟ್ಟುಕೊಂಡು ರಾಜಕಾರಣಕ್ಕೆ ಬರಬೇಕು

ಬೆಂಗಳೂರು: ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ಮನೆ ಬಾಗಿಲಿಗೆ ಬರಲಿದೆ. ಇದಕ್ಕೆ ನಾನೇ ಉತ್ತಮ ಉದಾಹರಣೆ, ಮಹಿಳೆಯರು ಗುರಿ ಇಟ್ಟುಕೊಂಡು ರಾಜಕಾರಣಕ್ಕೆ ಬರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ ನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಸಬಲೀಕರಣ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ನಡೆಯುತ್ತಿರುವ ಮಹಿಳಾ ಸಬಲೀಕರಣ ಕಾರ್ಯಗಾರದಲ್ಲಿ ಮಾತನಾಡಿದ ಸಚಿವರು, ಬೂತ್‌ಮಟ್ಟದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಬಿಜೆಪಿಯಲ್ಲಿ ಆರ್.ಎಸ್.ಎಸ್ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದೆ, ಅದೇ ರೀತಿ ಮಹಿಳಾ ಕಾಂಗ್ರೆಸ್ ಘಟಕ ಕೂಡ ಪಕ್ಷದಲ್ಲಿ ಕೆಲಸ ಮಾಡುತ್ತಿದೆ. ಉತ್ತಮ ಕೆಲಸ ಮಾಡಿದರೆ ಅಧಿಕಾರ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಮುಂಬರುವ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಎಲ್ಲಾ ವರ್ಗದವರನ್ನು ಗುರುತಿಸಿ ಟಿಕೆಟ್ ನೀಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಸಂಘಟನೆಯಲ್ಲಿ ಒತ್ತು ನೀಡುವವರನ್ನು, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ದರಾಗಿರುವವರನ್ನು ಗುರುತಿಸಬೇಕು. ನಿಮ್ಮ ಅಕ್ಕಪಕ್ಕದ ಮನೆಯವರ ಮನಸ್ಸನ್ನು ಗೆದ್ದು, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮಾಡಬೇಕು. ನಿಸ್ವಾರ್ಥದಿಂದ ಪಕ್ಷದಲ್ಲಿ ಕೆಲಸ ಮಾಡಬೇಕು ಎಂದರು.

ಈ ವೇಳೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌, ರಾಷ್ಟ್ರೀಯ ‌ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಕಾ ಲಾಂಬಾ, ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯಾ ರೆಡ್ಡಿ, ಮಹಿಳಾ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ಸೋಫಿಯಾ ಜುಬೇರಾ, ಪ್ರಧಾನ ಕಾರ್ಯದರ್ಶಿ ಸೆವಾ ಸೆಲ್ವಾನ್, ಶಾಸಕರಾದ ಮಂಥರ್ ಗೌಡ, ನಯನ ಮೋಟಮ್ಮ, ಮಾಜಿ ಸಚಿವರಾದ ರಾಣಿ ಸತೀಶ್ ‌ಸೇರಿದಂತೆ ಮಹಿಳಾ ಕಾಂಗ್ರೆಸ್ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಿಎಂ ಕೊಟ್ಟ ಮಾತಿನಂತೆ ನಡೆಯಲಿದ್ದಾರೆ

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಧಾನವಾಗಿಯಾದರೂ ಕೊಟ್ಟ ಮಾತಿನಂತೆ ನಡೆಯುತ್ತಾರೆ ಎನ್ನುವ ಭರವಸೆ ಇಂದಿಗೂ ಇದೆ. ಡಾ.ಯತೀಂದ್ರ ಸಿದ್ದ ರಾಮಯ್ಯ ಅವರ ಮಾತೇ ನಮಗೆ ವೇದ ವಾಕ್ಯ. ಅವರೇ ಹೈಕಮಾಂಡ್ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಯತೀಂದ್ರ ಅವರ ಹೇಳಿಕೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಯತೀಂದ್ರ ಅವರಷ್ಟು ತಿಳಿವಳಿಕೆ ನಮಗಿಲ್ಲ ಎಂದು ವ್ಯಂಗ್ಯವಾಡಿದರು.

ರಾಷ್ಟ್ರಗೀತೆಗೂ ಮುನ್ನ ಇನ್ನು ವಂದೇ ಮಾತರಂ ಹಾಡುವುದು ಕಡ್ಡಾಯ

ನವದೆಹಲಿ: ಬಂಕಿಂಚಂದ್ರ ಚಟೋಪಾಧ್ಯಾಯ ಬರೆದಿರುವ ವಂದೇ ಮಾತರಂ ಗೀತೆಗೆ 150 ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ಗೀತೆ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನಿಯಮಗಳನ್ನು ಬಿಡುಗಡೆ ಮಾಡಿದೆ. ಅದರನ್ವಯ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳುಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಷ್ಟ್ರಗೀತೆ ಜನ ಗಣ ಮನಕ್ಕೂ ಮೊದಲು ವಂದೇ ಮಾತರಂ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕು. ಮೊದಲಿನ 2 ಚರಣದ ಬದಲು 3 ನಿಮಿಷ 10 ಸೆಕೆಂಡ್ ಅವಧಿ ಹೊಂದಿರುವ ಪೂರ್ತಿ (ಎಲ್ಲ 6 ಚರಣ) ಹಾಡಬೇಕು ಅಥವಾ ನುಡಿಸಬೇಕು’ ಎಂದು ಸೂಚಿಸಿದೆ.

‘ಸರ್ಕಾರದ ಪ್ರಶಸ್ತಿ ಪ್ರದಾನ ಸೇರಿದಂತೆ ರಾಷ್ಟ್ರಪತಿಗಳು ಭಾಗಿಯಾಗುವ ಎಲ್ಲಾ ಸಮಾರಂಭಗಳಲ್ಲಿ ಅವರ ಆಗಮನ ಮತ್ತು ನಿರ್ಗಮನದ ವೇಳೆ ವಂದೇ ಮಾತರಂ ಮೊಳಗಬೇಕು. ಶಾಲೆ ಕಾಲೇಜುಗಳಲ್ಲೂ ಪ್ರಾರ್ಥನೆ ವೇಳೆ ಗೀತೆ ಹಾಡಬೇಕು. ಈ ವೇಳೆ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು’ ಎಂದು ಹೊಸ ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಚಿತ್ರಮಂದಿರಗಳಲ್ಲಿ ಪ್ರಸಾರ ಆಗುವ ಸಾಕ್ಷ್ಯಚಿತ್ರ ಅಥವಾ ಸಿನಿಮಾಗಳ ಮಧ್ಯೆ ಈ ಗೀತೆ ಪ್ರಸಾರವಾದರೆ ಪ್ರೇಕ್ಷಕರು ಎದ್ದುನಿಲ್ಲುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಯತೀಂದ್ರ ಹೇಳಿಕೆಗೆ ನೋ ರಿಯಾಕ್ಷನ್

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಸುಮ್ಮನಿದ್ದರೆ ನಾವು ಏನೆಂದು ತಿಳಿದುಕೊಳ್ಳಬೇಕು ಎಂದು ಗೃಹಮಂತ್ರಿ ಜಿ.ಪರಮೇಶ್ವರ್ ಪ್ರಶ್ನಿಸಿದರು.

ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಏನು ನಡೆದಿದೆ ಎಂಬುದುಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಹೈಕಮಾಂಡ್‌ಗೆ ಮಾತ್ರ ಗೊತ್ತಿದೆ. ಹೈಕಮಾಂಡ್ ಸುಮ್ಮನಿದ್ರೆ ನಾವು ಏನೆಂದು ಅರ್ಥ ಮಾಡಿಕೊಳ್ಳಬೇಕು ಎಂದರು.

ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಪರಮೇಶ್ವರ್, ಅದು ಯತೀಂದ್ರ ಅವರ ವೈಯಕ್ತಿಕ ಹೇಳಿಕೆ. ನಾವು ಹೈಕಮಾಂಡ್ ಮೇಲೆ ಅವಲಂಬಿತರಾಗಿದ್ದೇವೆ. ಒಪ್ಪಂದಆಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿರಬಹುದು. ಅದು ಅವರ ಅಭಿಪ್ರಾಯ. ಅವರಿಗೆ ಗೊತ್ತಿರುವ ವಿಚಾರ ನಮಗೆ ಗೊತ್ತಿಲ್ಲ ಎಂದು ಹೇಳಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮರುಸ್ಥಾಪಿಸಲಿ

ಹುಬ್ಬಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮರು ಜಾರಿಗಾಗಿ ಹೋರಾಟ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ  ಯೋಜನೆ ಜಾರಿಗೆ ತಂದಿದ್ದರು. ಈಗಿನ ಕೇಂದ್ರದ ಬಿಜೆಪಿ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದು ಮಾಡಿ ವಿಬಿ-ಜಿ ರಾಮ್ ಜಿ ಕಾಯ್ದೆ ಜಾರಿ ಮಾಡಿದೆ. ಇದರಿಂದ ಗ್ರಾಮೀಣ ಭಾಗದ ಜನರು ನಿರುದ್ಯೋಗಿಗಳಾಗಲಿದ್ದಾರೆ ಎಂದು ದೂರಿದರು.ಈ

ಯೋಜನೆಗೆ ಮೊದಲು ಕೇಂದ್ರಸರ್ಕಾರ ಶೇ. 90 ಅನುದಾನ ನೀಡುತ್ತಿದ್ದು, ಇದೀಗ ಅದನ್ನು ಶೇ.60ಕ್ಕೆ ಇಳಿಸಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹಾಕಿದೆ. ಬಿಜೆಪಿಯವರು ಈ ಯೋಜನೆಗೆ ಧರ್ಮದ ಅರ್ಥ ಕಲ್ಪಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ನಾವು ಮನುಷ್ಯ ಧರ್ಮ ನಂಬಿದವರು. ಹೀಗಾಗಿ, ವಿಬಿ-ಜಿ ರಾಮ್ ಜಿ ವಿರುದ ಹೋರಾಟ ಗಟ್ಟಿಗೊಳಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮರುಸ್ಥಾಪನೆಗೆ ಒತ್ತಾಯಿಸಲಾಗುವುದು ಎಂದರು

ಖಾಸಗಿ ಆಸ್ಪತ್ರೆಗೆ ಮಹಾನಗರ ಪಾಲಿಕೆಯಿಂದ ಸ್ವಚ್ಛತೆಯ ಪಾಠ

ಬಳ್ಳಾರಿ: ರಸ್ತೆ ಬದಿ ಕಸ ಎಸೆಯುತ್ತಿದ್ದ ನಗರದ ಖಾಸಗಿ ಆಸ್ಪತ್ರೆ ಮುಂದೆ ಮಹಾನಗರ ಪಾಲಿಕೆ ಸಿಬ್ಬಂದಿ ತ್ಯಾಜ್ಯ ಸುರಿದು ಸ್ವಚ್ಛತೆಯ ಪಾಠ ಕಲಿಸಿದೆ.

ಪಾರ್ವತಿನಗರದಲ್ಲಿರುವ ಖಾಸಗಿ ಆಸ್ಪತ್ರೆ ಸಿಬ್ಬಂದಿ ವೈದ್ಯಕೀಯ ತ್ಯಾಜ್ಯವನ್ನು ರಸ್ತೆ ಬದಿ ಹಾಕುತ್ತಿದ್ದರು. ಇದರಿಂದ ಬೇಸತ್ತ ಮಹಾನಗರ ಪಾಲಿಕೆ ಸಿಬ್ಬಂದಿ ಗುರುವಾರ ಆಸ್ಪತ್ರೆ ಮುಂದೆ ತ್ಯಾಜ್ಯ ಸುರಿದರು.