ರಾಯಚೂರು ನಗರ ಕ್ಷೇತ್ರ, ಇಲ್ಲಿ ಯಾರ ಪ್ರಾಬಲ್ಯ..?

ರಾಯಚೂರು: ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೆ 14 ಚುನಾವಣೆಗಳು ನಡೆದಿವೆ. ಈ ಪೈಕಿ 7 ಬಾರಿ ಕಾಂಗ್ರೆಸ್ ಗೆದ್ದಿದೆ. 1952ರಲ್ಲಿ  ಇದು ದ್ವಿಸದಸ್ಯ ಕ್ಷೇತ್ರವಾಗಿದ್ದು, ಒಂದು ಸ್ಥಾನ ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾಗಿತ್ತು. ಎಲ್ಲ 14 ಚುನಾವಣೆಗಳಲ್ಲೂ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಕ್ಷೇತ್ರದ ವಿಶೇಷತೆಯಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಅದಕ್ಕೆ ಪ್ರಮುಖ ಕಾರಣ. 6 ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೈಯದ್ ಯಾಸೀನ್ 4 ಬಾರಿ ಸೋತು 2 ಬಾರಿ ಗೆದ್ದಿದ್ದಾರೆ. ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅಳಿಯ ಎಂಬುದೇ ಸೈಯದ್ ಯಾಸೀನ್ ರಾಜಕೀಯ ಮೆರಿಟ್ ಆಗಿದೆ. ಕ್ಷೇತ್ರದಲ್ಲಿ ಒಂದು ಬಾರಿ ಸೋಷಲಿಸ್ಟ್ ಪಕ್ಷ, ಒಂದು ಬಾರಿ ಜನತಾ ಪಕ್ಷ, 2 ಬಾರಿ ಜನತಾ ದಳ, 2 ಬಾರಿ ಬಿಜೆಪಿ ಹಾಗೂ ಒಂದು ಬಾರಿ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಾರೆ. ಕ್ಷೇತ್ರದ ಒಟ್ಟಾರೆ ರಾಜಕೀಯ ಲೆಕ್ಕಾಚಾರ ನೋಡುವುದಾದರೆ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ. ಆದರೆ, ಕೆಲ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣರಾಗಿದ್ದಾರೆ ಎಂಬುದು ಗಮನಾರ್ಹ. ಕ್ಷೇತ್ರದ ಮತದಾರರು ಅಚ್ಷರಿಯ ಅಭ್ಯರ್ಥಿಗಳನ್ನೂ ಗೆಲ್ಲಿಸಿದ್ದಾರೆ. ಮೂಲತಃ ಲಿಂಗಸ್ಗೂರು ತಾಲೂಕಿನ ಸರ್ಜಾಪುರದವರಾದ  ಎಂ.ಎಸ್.ಪಾಟೀಲ್ 1985ರಲ್ಲಿ ಕುಷ್ಟಗಿಯಲ್ಲಿ ಗೆದ್ದು, 1989 ಹಾಗೂ 1994ರಲ್ಲಿ ರಾಜಕೀಯವಾಗಿ ರಾಯಚೂರಿಗೆ ವಲಸೆ ಬಂದು ಜಯಗಳಿಸಿದ್ದರು.

ರಾಯಚೂರು ನಗರ ಕ್ಷೇತ್ರದಿಂದ ಒಮ್ಮೆ ಜೆಡಿಎಸ್ ಹಾಗೂ ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿರುವ ಡಾ.ಶಿವರಾಜ ಪಾಟೀಲ್ ಕೂಡ ಮಸ್ಕಿ ತಾಲೂಕಿನ ಸಾನಬಾಳದವರು. ವೈದ್ಯಕೀಯ ವೃತ್ತಿಯಲ್ಲಿದ್ದವರು ದಿಢೀರನೆ ರಾಜಕೀಯಕ್ಕೆ ಬಂದು ಶಾಸಕರಾಗಿದ್ದು ಇವರ ವಿಶೇಷತೆ. ಇವರ ಗೆಲುವಿನಲ್ಲಿ ಕಾಂಗ್ರೆಸ್ ನಾಯಕರ ಕೊಡುಗೆ ದೊಡ್ಡಮಟ್ಡದಲ್ಲೇ ಇದೆ. ಸೈಯದ್ ಯಾಸೀನ್ ಅವರನ್ನು ಸೋಲಿಸಿ ರಾಜಕೀಯವಾಗಿ ಮೂಲೆಗುಂಪು ಮಾಡಬೇಕೆಂಬ‌ ಕೆಲ ಕಾಂಗ್ರೆಸ್ಸಿಗರ ಪ್ರಯತ್ನ ಶಿವರಾಜ ಪಾಟೀಲ್ ಅವರಿಗೆ ದೊಡ್ಡ ಮಟ್ಟದಲ್ಲೇ ನೆರವಾಗಿದೆ.‌