ಬಳ್ಳಾರಿ ಬಿಜೆಪಿಯಲ್ಲಿ ಮತ್ತೆ ಜನಾರ್ಧನ ರೆಡ್ಡಿ ಹವಾ

ಬಳ್ಳಾರಿ: ಗಾಲಿ ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ. ಕೇಂದ್ರ ಗೃಹಸಚಿವ ಅಮಿತ್ ಷಾ 2018 ರ ವಿಧಾನಸಭಾ ಚುನಾವಣೆಗೂ ಮುನ್ನ ಈ ಮಾತು ಹೇಳಿದ್ದರು. ಈ ಮೂಲಕ ಜನಾರ್ಧನ ರೆಡ್ಡಿ ಬಿಜೆಪಿ ಮರು ಸೇರ್ಪಡೆ ಆಸೆಯನ್ನು ಅಮಿತ್ ಷಾ ಭಗ್ನಗೊಳಿಸಿದ್ದರು.
2023 ರ ಚುನಾವಣೆಯಲ್ಲೂ ಜನಾರ್ಧನ ರೆಡ್ಡಿ ಬಿಜೆಪಿ ಸೇರ್ಪಡೆ ಆಸೆ ಕೈಗೂಡಿರಲಿಲ್ಲ. ಆಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಂದರೆ ಕೆಆರ್ಪಿಪಿ ಸ್ಥಾಪಿಸಿ ಚುನಾವಣೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ವೈಯಕ್ತಿಕ ವರ್ಚಸ್ಸು ಸಾಬೀತುಪಡಿಸಿದ್ದರು.
ಇದರೊಂದಿಗೆ ಬಳ್ಳಾರಿ ಜಿಲ್ಲೆಯಲ್ಲಿ ಕೆಲ ಬಿಜೆಪಿ ಅಭ್ಯರ್ಥಿಗಳ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಗಾಲಿ ಜನಾರ್ಧನ ರೆಡ್ಡಿ ಬಿಜೆಪಿ ಸೇರ್ಪಡೆ ಹಾದಿಯನ್ನು ಸುಗಮಗೊಳಿಸಿಕೊಂಡಿದ್ದರು.
ಆಗ ಬಿಜೆಪಿಗೆ ಬೇಕಾಗಿರದಿದ್ದ ಜನಾರ್ಧನರೆಡ್ಡಿ ಹಿಡಿತದಲ್ಲೇ ಇದೀಗ ಬಳ್ಳಾರಿ ಜಿಲ್ಲೆಯ ಬಿಜೆಪಿ ಇದೆ. ಬಿಜೆಪಿ ಪದಾಧಿಕಾರಿಗಳ ನೇಮಕದಲ್ಲಿ ಜನಾರ್ಧನ ರೆಡ್ಡಿ ಮಾತೇ ಅಂತಿಮವಾಗಿದೆ
ಇದರಿಂದಾಗಿ ನಗರ ಘಟಕ, ಒಬಿಸಿ, ಎಸ್ಟಿ,
ಮಹಿಳಾ ಮೋರ್ಚಾ ಸೇರಿದಂತೆ ಪಕ್ಷದಲ್ಲಿ ಜನಾರ್ಧನ ರೆಡ್ಡಿ ಬೆಂಬಲಿಗರು ಅಂದರೆ ಕೆಆರ್ಪಿಪಿಯಲ್ಲಿದ್ದವರೇ ಪ್ರಾಬಲ್ಯ ಸಾಧಿಸಿದ್ದಾರೆ.
ಇದರಿಂದಾಗಿ ಬಿಜೆಪಿಯ ಬಹುತೇಕ ಮೂಲ ಕಾರ್ಯಕರ್ತರು ಮೂಲೆ ಗುಂಪಾಗಿದ್ದಾರೆ.
ಪದಾಧಿಕಾರಿಗಳ ನೇಮಕದಲ್ಲಿ ಮಾಜಿ ಸಚಿವ ಬಿ ಶ್ರೀರಾಮುಲು ಬೆಂಬಲಿಗರಿಗೂ ಸ್ಥಾನ ಸಿಕ್ಕಿಲ್ಲವಂತೆ. ಅಷ್ಟರ ಮಟ್ಟಿಗೆ ಬಳ್ಳಾರಿ ಬಿಜೆಪಿ ರಾಜಕೀಯದಲ್ಲಿ ಬಿ ಶ್ರೀರಾಮುಲು ಸೈಲೆಂಟ್ ಆಗಿದ್ದಾರೆ. ಜಾತಿ ಬಲದ ಕಾರಣಕ್ಕೆ ಬಿಜೆಪಿಯಲ್ಲಿ ಶ್ರೀರಾಮುಲು ಜನಾರ್ಧನ ರೆಡ್ಡಿ ಅವರಿಗಿಂತ ಬಲಿಷ್ಠ ನಾಯಕರೇ ಆಗಿರಬಹುದು. ಆದರೆ, 2023 ರ ವಿಧಾನಸಭೆ ಹಾಗೂ 2024 ರ ಲೋಕಸಭೆ ಚುನಾವಣೆ ಸೋಲು ಶ್ರೀರಾಮುಲು ಅವರನ್ನು ಅಷ್ಟರ ಮಟ್ಟಿಗೆ ಹತಾಶರನ್ನಾಗಿ ಮಾಡಿದೆ. ಜನಾರ್ಧನ ರೆಡ್ಡಿ ಅವರ ವಿರೋಧ ಕಟ್ಟಿಕೊಂಡರೆ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ ಎಂಬುದು ಶ್ರೀರಾಮುಲು ಅವರಿಗೆ ಮನವರಿಕೆ ಆದಂತಿದೆ.
ಇರಲಿ ಈ ಇಬ್ಬರು ಸ್ನೇಹಿತರ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಬಳ್ಳಾರಿ ಜಿಲ್ಲೆಯ ಬಿಜೆಪಿ ಪರಿಸ್ಥಿತಿ ಬಗ್ಗೆ ನೋಡೋಣ. ಬಳ್ಳಾರಿ ಜಿಲ್ಲೆಯ ಬಿಜೆಪಿ ಇದೀಗ ಸಂಪೂರ್ಣವಾಗಿ ಮಾಜಿ ಮಂತ್ರಿ
ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ವಶದಲ್ಲಿದೆ. 2004 ರಿಂದ 2011ರವರೆಗೆ ಇದ್ದ ಪರಿಸ್ಥಿತಿ ಬಳ್ಳಾರಿ ಜಿಲ್ಲೆಯ ಬಿಜೆಪಿಯಲ್ಲಿ ಮರುಕಳಿಸಿದೆ. ನಾವು ಕೂಡ ಜನಾರ್ಧನ ರೆಡ್ಡಿ ಸ್ಥಾಪಿಸಿದ್ದ ಕೆಆರ್ಪಿಪಿ ಸೇರಿದ್ದರೆ ಚೆನ್ನಾಗಿತ್ತು ಎಂದು ಪಕ್ಷದ ಮೂಲ ಕಾರ್ಯಕರ್ತರು ಹೇಳುವಷ್ಟರ ಮಟ್ಟಿಗೆ ಬಳ್ಳಾರಿ ಬಿಜೆಪಿ ಜನಾರ್ಧನ ರೆಡ್ಡಿ ಹಿಡಿತದಲ್ಲಿದೆ. ಅಲ್ಲಿಗೆ ಬಿಜೆಪಿ ರಾಜ್ಯ ಹಾಗೂ ಕೇಂದ್ರದ ಪ್ರಮುಖರು ಕೂಡ ಜನಾರ್ಧನ ರೆಡ್ಡಿ ಅವರಿಗೆ ಶರಣಾಗಿದ್ದಾರೆ. ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಅದಕ್ಕಾಗಿ ಗೆಲ್ಲುವ ಅಥವಾ ಗೆಲ್ಲಿಸುವ ಕುದುರೆಗಳ ಮೇಲೆ ಪಕ್ಷದ ನಾಯಕರು ಕಣ್ಣಿಟ್ಟಿದ್ದಾರೆ. ಈ ಪೈಕಿ ಜನಾರ್ಧನ ರೆಡ್ಡಿ ಒಬ್ಬರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ.
ಬಳ್ಳಾರಿ ನಗರ, ಗ್ರಾಮೀಣ ಹಾಗೂ ಕಂಪ್ಲಿ ಕ್ಷೇತ್ರದಲ್ಲಿ ಬಿಜೆಪಿ ಸೋಲಿನಲ್ಲಿ ಜನಾರ್ಧನ ರೆಡ್ಡಿ ಅವರ ರಾಜಕೀಯ ನಡೆ ಪ್ರಮುಖ ಪಾತ್ರ ವಹಿಸಿತ್ತು. ಸಂಡೂರಿನಲ್ಲಿ ಬಿಜೆಪಿಗೆ ಇದುವರೆಗೆ ಗೆಲ್ಲಲು ಸಾಧ್ಯವಾಗಿಲ್ಲ. ಸಿರಗುಪ್ಪದಲ್ಲಿ ಮಾಜಿ ಶಾಸಕ ಸೋಮಲಿಂಗಪ್ಪ ವೈಯಕ್ತಿಕ ವರ್ಚಸ್ಸಿನಿಂದ ಗೆಲ್ಲುತ್ತಾ ಬಂದಿದ್ದಾರೆ.
ಇದರಿಂದಾಗಿ ಸಿರಗುಪ್ಪ ಹೊರತುಪಡಿಸಿದರೂ ಇನ್ನುಳಿದ ನಾಲ್ಕು ಕ್ಷೇತ್ರಗಳ ಗೆಲುವಿನ ಹೊಣೆಗಾರಿಕೆ ಬಿಜೆಪಿ ಜನಾರ್ಧನ ರೆಡ್ಡಿ ಹೆಗಲಿಗೆ ಹಾಕುವ ನಿರೀಕ್ಷೆಗಳಿವೆ. ಅದಕ್ಕಾಗಿ ಬಿಜೆಪಿ ಈಗಲೇ ಜನಾರ್ಧನ ರೆಡ್ಡಿಗೆ ಶರಣು ಎಂದು ಹೇಳಿರುವಂತಿದೆ.

