ಸಿಎಂ ಕೊಟ್ಟ ಮಾತಿನಂತೆ ನಡೆಯಲಿದ್ದಾರೆ

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಧಾನವಾಗಿಯಾದರೂ ಕೊಟ್ಟ ಮಾತಿನಂತೆ ನಡೆಯುತ್ತಾರೆ ಎನ್ನುವ ಭರವಸೆ ಇಂದಿಗೂ ಇದೆ. ಡಾ.ಯತೀಂದ್ರ ಸಿದ್ದ ರಾಮಯ್ಯ ಅವರ ಮಾತೇ ನಮಗೆ ವೇದ ವಾಕ್ಯ. ಅವರೇ ಹೈಕಮಾಂಡ್ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಪೂರ್ಣಾವಧಿ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಯತೀಂದ್ರ ಅವರ ಹೇಳಿಕೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಯತೀಂದ್ರ ಅವರಷ್ಟು ತಿಳಿವಳಿಕೆ ನಮಗಿಲ್ಲ ಎಂದು ವ್ಯಂಗ್ಯವಾಡಿದರು.

ರಾಷ್ಟ್ರಗೀತೆಗೂ ಮುನ್ನ ಇನ್ನು ವಂದೇ ಮಾತರಂ ಹಾಡುವುದು ಕಡ್ಡಾಯ

ನವದೆಹಲಿ: ಬಂಕಿಂಚಂದ್ರ ಚಟೋಪಾಧ್ಯಾಯ ಬರೆದಿರುವ ವಂದೇ ಮಾತರಂ ಗೀತೆಗೆ 150 ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ಗೀತೆ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನಿಯಮಗಳನ್ನು ಬಿಡುಗಡೆ ಮಾಡಿದೆ. ಅದರನ್ವಯ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳುಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಷ್ಟ್ರಗೀತೆ ಜನ ಗಣ ಮನಕ್ಕೂ ಮೊದಲು ವಂದೇ ಮಾತರಂ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕು. ಮೊದಲಿನ 2 ಚರಣದ ಬದಲು 3 ನಿಮಿಷ 10 ಸೆಕೆಂಡ್ ಅವಧಿ ಹೊಂದಿರುವ ಪೂರ್ತಿ (ಎಲ್ಲ 6 ಚರಣ) ಹಾಡಬೇಕು ಅಥವಾ ನುಡಿಸಬೇಕು’ ಎಂದು ಸೂಚಿಸಿದೆ.

‘ಸರ್ಕಾರದ ಪ್ರಶಸ್ತಿ ಪ್ರದಾನ ಸೇರಿದಂತೆ ರಾಷ್ಟ್ರಪತಿಗಳು ಭಾಗಿಯಾಗುವ ಎಲ್ಲಾ ಸಮಾರಂಭಗಳಲ್ಲಿ ಅವರ ಆಗಮನ ಮತ್ತು ನಿರ್ಗಮನದ ವೇಳೆ ವಂದೇ ಮಾತರಂ ಮೊಳಗಬೇಕು. ಶಾಲೆ ಕಾಲೇಜುಗಳಲ್ಲೂ ಪ್ರಾರ್ಥನೆ ವೇಳೆ ಗೀತೆ ಹಾಡಬೇಕು. ಈ ವೇಳೆ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು’ ಎಂದು ಹೊಸ ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಚಿತ್ರಮಂದಿರಗಳಲ್ಲಿ ಪ್ರಸಾರ ಆಗುವ ಸಾಕ್ಷ್ಯಚಿತ್ರ ಅಥವಾ ಸಿನಿಮಾಗಳ ಮಧ್ಯೆ ಈ ಗೀತೆ ಪ್ರಸಾರವಾದರೆ ಪ್ರೇಕ್ಷಕರು ಎದ್ದುನಿಲ್ಲುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಯತೀಂದ್ರ ಹೇಳಿಕೆಗೆ ನೋ ರಿಯಾಕ್ಷನ್

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಸುಮ್ಮನಿದ್ದರೆ ನಾವು ಏನೆಂದು ತಿಳಿದುಕೊಳ್ಳಬೇಕು ಎಂದು ಗೃಹಮಂತ್ರಿ ಜಿ.ಪರಮೇಶ್ವರ್ ಪ್ರಶ್ನಿಸಿದರು.

ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಏನು ನಡೆದಿದೆ ಎಂಬುದುಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಹೈಕಮಾಂಡ್‌ಗೆ ಮಾತ್ರ ಗೊತ್ತಿದೆ. ಹೈಕಮಾಂಡ್ ಸುಮ್ಮನಿದ್ರೆ ನಾವು ಏನೆಂದು ಅರ್ಥ ಮಾಡಿಕೊಳ್ಳಬೇಕು ಎಂದರು.

ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಪರಮೇಶ್ವರ್, ಅದು ಯತೀಂದ್ರ ಅವರ ವೈಯಕ್ತಿಕ ಹೇಳಿಕೆ. ನಾವು ಹೈಕಮಾಂಡ್ ಮೇಲೆ ಅವಲಂಬಿತರಾಗಿದ್ದೇವೆ. ಒಪ್ಪಂದಆಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿರಬಹುದು. ಅದು ಅವರ ಅಭಿಪ್ರಾಯ. ಅವರಿಗೆ ಗೊತ್ತಿರುವ ವಿಚಾರ ನಮಗೆ ಗೊತ್ತಿಲ್ಲ ಎಂದು ಹೇಳಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮರುಸ್ಥಾಪಿಸಲಿ

ಹುಬ್ಬಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮರು ಜಾರಿಗಾಗಿ ಹೋರಾಟ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ  ಯೋಜನೆ ಜಾರಿಗೆ ತಂದಿದ್ದರು. ಈಗಿನ ಕೇಂದ್ರದ ಬಿಜೆಪಿ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದು ಮಾಡಿ ವಿಬಿ-ಜಿ ರಾಮ್ ಜಿ ಕಾಯ್ದೆ ಜಾರಿ ಮಾಡಿದೆ. ಇದರಿಂದ ಗ್ರಾಮೀಣ ಭಾಗದ ಜನರು ನಿರುದ್ಯೋಗಿಗಳಾಗಲಿದ್ದಾರೆ ಎಂದು ದೂರಿದರು.ಈ

ಯೋಜನೆಗೆ ಮೊದಲು ಕೇಂದ್ರಸರ್ಕಾರ ಶೇ. 90 ಅನುದಾನ ನೀಡುತ್ತಿದ್ದು, ಇದೀಗ ಅದನ್ನು ಶೇ.60ಕ್ಕೆ ಇಳಿಸಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹಾಕಿದೆ. ಬಿಜೆಪಿಯವರು ಈ ಯೋಜನೆಗೆ ಧರ್ಮದ ಅರ್ಥ ಕಲ್ಪಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ನಾವು ಮನುಷ್ಯ ಧರ್ಮ ನಂಬಿದವರು. ಹೀಗಾಗಿ, ವಿಬಿ-ಜಿ ರಾಮ್ ಜಿ ವಿರುದ ಹೋರಾಟ ಗಟ್ಟಿಗೊಳಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮರುಸ್ಥಾಪನೆಗೆ ಒತ್ತಾಯಿಸಲಾಗುವುದು ಎಂದರು

ಖಾಸಗಿ ಆಸ್ಪತ್ರೆಗೆ ಮಹಾನಗರ ಪಾಲಿಕೆಯಿಂದ ಸ್ವಚ್ಛತೆಯ ಪಾಠ

ಬಳ್ಳಾರಿ: ರಸ್ತೆ ಬದಿ ಕಸ ಎಸೆಯುತ್ತಿದ್ದ ನಗರದ ಖಾಸಗಿ ಆಸ್ಪತ್ರೆ ಮುಂದೆ ಮಹಾನಗರ ಪಾಲಿಕೆ ಸಿಬ್ಬಂದಿ ತ್ಯಾಜ್ಯ ಸುರಿದು ಸ್ವಚ್ಛತೆಯ ಪಾಠ ಕಲಿಸಿದೆ.

ಪಾರ್ವತಿನಗರದಲ್ಲಿರುವ ಖಾಸಗಿ ಆಸ್ಪತ್ರೆ ಸಿಬ್ಬಂದಿ ವೈದ್ಯಕೀಯ ತ್ಯಾಜ್ಯವನ್ನು ರಸ್ತೆ ಬದಿ ಹಾಕುತ್ತಿದ್ದರು. ಇದರಿಂದ ಬೇಸತ್ತ ಮಹಾನಗರ ಪಾಲಿಕೆ ಸಿಬ್ಬಂದಿ ಗುರುವಾರ ಆಸ್ಪತ್ರೆ ಮುಂದೆ ತ್ಯಾಜ್ಯ ಸುರಿದರು.

ಸಂಪಾಯಿತಲೇ ಪರಾಕ್

ಹೂವಿಹಡಗಲಿ (ವಿಜಯನಗರ): ತಾಲೂಕಿನ ಮೈಲಾರದಲ್ಲಿ ಗುರುವಾರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಿತು. ಗೊರವಪ್ಪ ಬಿಲ್ಲನ್ನೇರಿ ಸದ್ದಲೇ ಎಂದು ಕೂಗಿದ ಕೂಡಲೇ ಡೆಂಕನಮರಡಿಯಲ್ಲಿ ನೆರೆದಿದ್ದ ಲಕ್ಷಾಂತರ ಜನರು ಮೌನಕ್ಕೆ ಶರಣಾದರು. ಆಗ ಗೊರವಪ್ಪ ‘ಸಂಪಾಯಿತಲೇ ಪರಾಕ್’ ಎಂದು ಕಾರಣಿಕ ನುಡಿಯುತ್ತಿದ್ದಂತೆ ಜನರು ಕೇಕೆ ಹಾಕಿ ಸಂಭ್ರಮಿಸಿದರು.  ಸಂಪಾಯಿತಲೇ ಪರಾಕ್ ಎಂಬ ಕಾರ್ಣಿಕವನ್ನು ಈ ಬಾರಿ ಮಳೆ-ಬೆಳೆ ಸಮೃದ್ಧವಾಗಲಿದೆ ಎಂದು ವಿಶ್ಲೇಷಿಸಲಾಯಿತು. ಸತತ ಮೂರನೇ ವರ್ಷ ಗೊರವಪ್ಪ ಸಂಪಾಯಿತಲೇ ಕಾರಣಿಕ ನುಡಿಯುತ್ತಿರುವುದು ವಿಶೇಷ.

ರಾಯಚೂರು ಗ್ರಾಮೀಣ, ಬಿಜೆಪಿಗಿಲ್ಲಿ ಸುಲಭವಿಲ್ಲ

2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಕಲ್ಮಲಾ ಕ್ಷೇತ್ರ ರದ್ದಾಗಿ ಅಸ್ತಿತ್ವಕ್ಕೆ ಬಂದ ರಾಯಚೂರು ಗ್ರಾಮೀಣ ಸಂಪೂರ್ಣ ಹಳ್ಳಿಗಳನ್ನೇ ಹೊಂದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಉತ್ತಮ ನೆಲೆ ಹೊಂದಿವೆ. ಆದರೆ, ಜೆಡಿಎಸ್ ಪಕ್ಷಕ್ಕೆ ಇಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. 2008 ಹಾಗೂ 2018, 2023 ರಲ್ಲಿ ಕಾಂಗ್ರೆಸ್ ಮತ್ತು 2013 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. 2008 ಹಾಗೂ 2013ರಲ್ಲಿ ರಾಜಾ ರಾಯಪ್ಪ ನಾಯಕ ಅವರನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ 2018 ಹಾಗೂ 2023 ರಲ್ಲಿ ಬಸನಗೌಡ ದದ್ದಲ್ ಅವರಿಗೆ ಟಿಕೆಟ್ ನೀಡಿದೆ. ಬಸನಗೌಡ ದದ್ದಲ್ 2008, 2013 ಹಾಗೂ 2018 ರ ಚುನಾವಣೆಯಲ್ಲಿ ಮೂರು ಪ್ರತ್ಯೇಕ ಪಕ್ಷಗಳಿಂದ ಸ್ಪರ್ಧಿಸಿದ್ದರು. 2008 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿದ್ದ ದದ್ದಲ್ 2013 ರಲ್ಲಿ ಮಾನ್ವಿ ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದರು. 2018 ರ ಚುನಾವಣೆಯಲ್ಲಿ ಮತ್ತೆ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಬಾರಿ ಶಾಸಕರಾಗಿದ್ದರು. ಕ್ಷೇತ್ರದ ಮೊದಲ ಶಾಸಕ,  ಲಿಂಗಸ್ಗೂರು ತಾಲೂಕು ಗುಂತಗೋಳ ಸಂಸ್ಥಾನದ ರಾಜಾ ರಾಯಪ್ಪ ನಾಯಕ ಪ್ರಸ್ತುತ ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ. ಇನ್ನು 2013ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ತಿಪ್ಪರಾಜು ಹವಾಲ್ದಾರ್ ಮೂಲತಃ ಶಿಕ್ಷಕರಾಗಿದ್ದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಆಪ್ತ ಸಹಾಯಕರಾಗಿ, ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು. ಈ ಮೂಲಕ ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲೇ ವಿಧಾನಸಭೆ ಪ್ರವೇಶಿಸಿದ್ದರು. 2018, 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ವಿರುದ್ಧ ಪರಾಭವಗೊಂಡಿದ್ದಾರೆ. ಬಸನಗೌಡ ದದ್ದಲ್ ಸಂಭಾವಿತ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದು ಎರಡನೇ ಬಾರಿ ಶಾಸಕರಾಗಿದ್ದಾರೆ. ಬಿಜೆಪಿಯಲ್ಲಿದ್ದ ಬಸನಗೌಡ ದದ್ದಲ್ ಆ ಬಳಿಕ ಬಿ.ಶ್ರೀರಾಮುಲು ಸ್ಥಾಪಿಸಿದ್ದ ಬಿ.ಎಸ್.ಆರ್. ಕಾಂಗ್ರೆಸ್  ಸೇರ್ಪಡೆಯಾಗಿದ್ದರು. ಆದರೆ, ಕಾಂಗ್ರೆಸ್ ಮಾತ್ರ ಬಸನಗೌಡ ದದ್ದಲ್ ಅವರಿಗೆ ಅದೃಷ್ಟದ ಪಕ್ಷವಾಗಿದೆ.

ಗೃಹಲಕ್ಷ್ಮೀ ಫಲಾನುಭವಿಗಳ ಸಮಸ್ಯೆ ಇತ್ಯರ್ಥಕ್ಕೆ ಕ್ರಮ

ವಿಧಾನ ಪರಿಷತ್ (ವಿಧಾನಸೌಧ): ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂದು ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಿಲ್ಲ. ಈ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು ಉಳಿದವರ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ವಿಶೇಷ ಅಧಿವೇಶನದ ವಿಧಾನ ಪರಿಷತ್‌ ಕಲಾಪದಲ್ಲಿ ಸದಸ್ಯರಾದ ಪಿ.ಎಚ್‌.ಪೂಜಾರ‌ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಇಲಾಖೆಗಳ ದಾಖಲೆಯಲ್ಲೂ ಇದೇ ರೀತಿ ತೋರಿಸುತ್ತಿದ್ದು, ಇದರಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದು, ಸರ್ಕಾರದ ಹಾಗೂ ನಮ್ಮ ಇಲಾಖೆಯದ್ದು ಯಾವುದೇ ತಪ್ಪಿಲ್ಲ ಎಂದರು.

ರಾಜ್ಯದಲ್ಲಿ ಸುಮಾರು 1.26 ಕೋಟಿ ಫಲಾನುಭವಿಗಳಿದ್ದು, ಕೆಲ ಫಲಾನುಭವಿಗಳು ಕೆಲವೊಂದು ವ್ಯವಹಾರ ನಡೆಸುವಾಗ ಜಿಎಸ್‌ಟಿ, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಗೃಹಲಕ್ಷ್ಮೀಗಾಗಿಯೇ ನಿರ್ಮಿಸಲಾಗಿರುವ ಸಾಫ್ಟ್‌ ವೇರ್‌ನಲ್ಲಿ ಜಿಎಸ್‌ಟಿ, ಆದಾಯ ತೆರಿಗೆ ಅಂತ ತೋರಿಸಿದರೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಗೃಹಲಕ್ಷ್ಮೀ ಯೋಜನೆ ನಿರಂತರ ಪ್ರಕ್ರಿಯೆ, ಈಗಾಗಲೇ ಆದಾಯ ತೆರಿಗೆ ಜಿಎಸ್‌ಟಿ ಕೌನ್ಸಿಲ್‌ ಗಮನಕ್ಕೂ ತರಲಾಗಿದೆ ಎಂದರು.

ದ್ವೇಷ ಭಾಷಣ ಮಸೂದೆ ನೆನೆಗುದಿಗೆ ಬೀಳಿಸಲು ರಾಷ್ಟ್ರಪತಿಗೆ ವರ್ಗ

ಬೆಂಗಳೂರು: ದೇಶದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಜನ ಸಮುದಾಯ ಅನೇಕ ನಿರೀಕ್ಷೆಗಳನ್ನು ಮಾಡಿತ್ತು. ಎಲ್ಲ ಹುಸಿಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 9 ಬಜೆಟ್‌ಗಳಲ್ಲಿಇದು ಅತ್ಯಂತ ದುರ್ಬಲ ಬಜೆಟ್ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಜೆಟ್‌ಗಳಲ್ಲಿ ಕೃಷಿ, ಕೈಗಾರಿಕಾ ವಲಯಗಳಿಗೆ ಪ್ರಾತಿನಿಧ್ಯ ಕೊಡುತ್ತಿದ್ದರು. ಬಡತನ ನಿರ್ಮೂಲನೆಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನೀಡಿದ್ದರು. ಇಡೀ ಪ್ರಪಂಚದಲ್ಲಿ ಅಂತಹ ಕಾರ್ಯಕ್ರಮ ಯಾವ ದೇಶಗಳು ನೀಡಿರಲಿಲ್ಲ. ಅದೆಲ್ಲ ಗಾಳಿಗೆ ತೂರಿ, ಇಡೀ ದೇಶಕ್ಕೆ ನಿರಾಸೆ ಮಾಡಿದ್ದಾರೆ‌ ಎಂದು ಟೀಕಿಸಿದರು.

53.50 ಲಕ್ಷ ಕೋಟಿ ರೂ.ಗಳಲ್ಲಿ 16 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಇಷ್ಟೊಂದು ಸಾಲ‌ ಮಾಡಿಕೊಂಡು, ವಿಧಾನಸಭೆಯಲ್ಲಿ ನಮಗೆ ನೀತಿಪಾಠ ಹೇಳುತ್ತಾರೆ. ಅಷ್ಟೊಂದು ಸಾಲ‌ ಮಾಡಿಕೊಂಡು ಜನ ಸಮುದಾಯಕ್ಕೆ ಏನು ಕೊಟ್ಟಿದ್ದೀರ ಎಂದು ಪ್ರಶ್ನಿಸಿದ ಅವರು, ಕರ್ನಾಟಕಕ್ಕೆ ಏನು ನೀಡಿಲ್ಲ. ಹೇಳಿಕೊಳ್ಳುವಂತಹ ಒಂದೇ ಒಂದು  ಯೋಜನೆಯನ್ನೂ ನೀಡಿಲ್ಲ. ನೀರಾವರಿ, ಕೃಷಿ,‌ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಬೇಕಿತ್ತು. ಯಾವುದೇ ಯೋಜನೆಯನ್ನು ನೀಡದೇ ಇರುವುದನ್ನು ಬಜೆಟ್ ಅಂತ ಕರೆಯಬೇಕೆ ಎಂದರು.

ವಿಶ್ವದಲ್ಲಿ ಶಿಕ್ಷಣ ವಲಯ ಸಾಕಷ್ಟು ವೇಗವಾಗಿ ಬದಲಾವಣೆ ಕಾಣುತ್ತಿದೆ. ದೇಶದಲ್ಲಿ ಶಿಕ್ಷಣವನ್ನೇ ಹಿಂದೆ ತಳ್ಳಿದ್ದಾರೆ. ರಾಜ್ಯಕ್ಕೆ ಐಐಟಿ, ಏಮ್ಸ್ ಸಂಸ್ಥೆಗಳನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ, ಪ್ಲಾಸ್ಟಿಕ್, ಬೆಂಕಿ ಪಟ್ಟಣದ ಬೆಲೆ‌ ಕಡಿಮೆ ಮಾಡಿದ್ದಾರೆ. ಇದೊಂದು ನಿರಾಶಾದಾಯಕ ಬಜೆಟ್ ಎಂದು ಹೇಳಿದರು.

ದ್ವೇಷ ಭಾಷಣ ಮಸೂದೆಯಲ್ಲಿನ 28 ಅಂಶಗಳನ್ನು ರಾಜ್ಯಪಾಲರು ಪ್ರಶ್ನಿಸಿದ್ದಾರೆ. ಅದನ್ನು ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ. ಮುಂದೆ ಏನಾಗುತ್ತದೆ ನೋಡೋಣ. ರಾಷ್ಟ್ರಪತಿಗಳು ಪರಿಶೀಲಿಸಿ ವಾಪಸ್ ಕೊಟ್ಟರೆ, ಬದಲಾವಣೆ ಮಾಡಿ ಕಳಿಸಲಾಗುವುದು ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಏನು ಬೇಕಾದರೂ ಮಾತನಾಡಿದರೆ, ಅದರ ಪರಿಣಾಮ‌ ಸಮಾಜಕ್ಕೆ ಏನಾಗುತ್ತದೆ. ಸಮುದಾಯಗಳನ್ನು ದೂಷಣೆ ಮಾಡುವುದು, ವೈಯಕ್ತಿಕವಾಗಿ ಮಾತನಾಡುವುದು. ಆ ಮಾತುಗಳು ಸಮಾಜದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ದ್ವೇಷಭಾಷಣ ಮಸೂದೆ ತಂದಿದ್ದೇವೆ. ಕೆಲವು ಭಾಗಗಳಲ್ಲಿ, ಕೆಲವರು ಭಾಷಣಗಳನ್ನು ಮಾಡಿದ್ದಾರೆ. ಭಾಷಣ ಮಾಡಿದ ಮೇಲೆ ಏನಾಯಿತು ಎಂಬುದನ್ನು ಗಮನಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಬಿಲ್ ತಂದಿದ್ದೇವೆ. ಯಾರು ಏನು ಬೇಕಾದರು ಮಾತಾಡಬಹುದೇ? ಸಮಾಜದಲ್ಲಿ ಅಶಾಂತಿ ಉಂಟು‌ ಮಾಡಬಹುದೇ ಎಂದರು.

ರಾಜ್ಯಪಾಲರು ಉದ್ದೇಶಪೂರ್ವಕವಾಗಿ, ದ್ವೇಷ ಭಾಷಣ ಮಸೂದೆ ನೆನೆಗುದಿಗೆ ಬೀಳಬೇಕು. ಇದು ಜಾರಿಯಾಗಬಾರದು ಎಂಬ ಉದ್ದೇಶದಿಂದ  ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಉದ್ಯಮಿ ಸಿ.ಜೆ.ರಾಯ್ ಅತ್ಮಹತ್ಯೆ ಪ್ರಕರಣದಲ್ಲಿ
ಬೇರೆಬೇರೆ ರೀತಿಯಲ್ಲಿ ಊಹಾಪೋಹಾಗಳು ಆಗಬಾರದು ಎಂಬ ಕಾರಣದಿಂದ ಎಸ್‌ಐಟಿ ರಚನೆ ಮಾಡಿದ್ದೇವೆ. ಎಸ್‌ಐಟಿ ವರದಿ ಏನು ಬರುತ್ತದೆ ಗಮನಿಸೋಣ. ಯಾರ ಪಾತ್ರಗಳು ಏನಿದೆ ಎಂಬುದು ನೋಡಬೇಕಾಗುತ್ತದೆ ಎಂದು ಹೇಳಿದರು.

ರಾಯಚೂರು ನಗರ ಕ್ಷೇತ್ರ, ಇಲ್ಲಿ ಯಾರ ಪ್ರಾಬಲ್ಯ..?

ರಾಯಚೂರು: ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೆ 14 ಚುನಾವಣೆಗಳು ನಡೆದಿವೆ. ಈ ಪೈಕಿ 7 ಬಾರಿ ಕಾಂಗ್ರೆಸ್ ಗೆದ್ದಿದೆ. 1952ರಲ್ಲಿ  ಇದು ದ್ವಿಸದಸ್ಯ ಕ್ಷೇತ್ರವಾಗಿದ್ದು, ಒಂದು ಸ್ಥಾನ ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾಗಿತ್ತು. ಎಲ್ಲ 14 ಚುನಾವಣೆಗಳಲ್ಲೂ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಕ್ಷೇತ್ರದ ವಿಶೇಷತೆಯಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಅದಕ್ಕೆ ಪ್ರಮುಖ ಕಾರಣ. 6 ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೈಯದ್ ಯಾಸೀನ್ 4 ಬಾರಿ ಸೋತು 2 ಬಾರಿ ಗೆದ್ದಿದ್ದಾರೆ. ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅಳಿಯ ಎಂಬುದೇ ಸೈಯದ್ ಯಾಸೀನ್ ರಾಜಕೀಯ ಮೆರಿಟ್ ಆಗಿದೆ. ಕ್ಷೇತ್ರದಲ್ಲಿ ಒಂದು ಬಾರಿ ಸೋಷಲಿಸ್ಟ್ ಪಕ್ಷ, ಒಂದು ಬಾರಿ ಜನತಾ ಪಕ್ಷ, 2 ಬಾರಿ ಜನತಾ ದಳ, 2 ಬಾರಿ ಬಿಜೆಪಿ ಹಾಗೂ ಒಂದು ಬಾರಿ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಾರೆ. ಕ್ಷೇತ್ರದ ಒಟ್ಟಾರೆ ರಾಜಕೀಯ ಲೆಕ್ಕಾಚಾರ ನೋಡುವುದಾದರೆ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ. ಆದರೆ, ಕೆಲ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣರಾಗಿದ್ದಾರೆ ಎಂಬುದು ಗಮನಾರ್ಹ. ಕ್ಷೇತ್ರದ ಮತದಾರರು ಅಚ್ಷರಿಯ ಅಭ್ಯರ್ಥಿಗಳನ್ನೂ ಗೆಲ್ಲಿಸಿದ್ದಾರೆ. ಮೂಲತಃ ಲಿಂಗಸ್ಗೂರು ತಾಲೂಕಿನ ಸರ್ಜಾಪುರದವರಾದ  ಎಂ.ಎಸ್.ಪಾಟೀಲ್ 1985ರಲ್ಲಿ ಕುಷ್ಟಗಿಯಲ್ಲಿ ಗೆದ್ದು, 1989 ಹಾಗೂ 1994ರಲ್ಲಿ ರಾಜಕೀಯವಾಗಿ ರಾಯಚೂರಿಗೆ ವಲಸೆ ಬಂದು ಜಯಗಳಿಸಿದ್ದರು.

ರಾಯಚೂರು ನಗರ ಕ್ಷೇತ್ರದಿಂದ ಒಮ್ಮೆ ಜೆಡಿಎಸ್ ಹಾಗೂ ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿರುವ ಡಾ.ಶಿವರಾಜ ಪಾಟೀಲ್ ಕೂಡ ಮಸ್ಕಿ ತಾಲೂಕಿನ ಸಾನಬಾಳದವರು. ವೈದ್ಯಕೀಯ ವೃತ್ತಿಯಲ್ಲಿದ್ದವರು ದಿಢೀರನೆ ರಾಜಕೀಯಕ್ಕೆ ಬಂದು ಶಾಸಕರಾಗಿದ್ದು ಇವರ ವಿಶೇಷತೆ. ಇವರ ಗೆಲುವಿನಲ್ಲಿ ಕಾಂಗ್ರೆಸ್ ನಾಯಕರ ಕೊಡುಗೆ ದೊಡ್ಡಮಟ್ಡದಲ್ಲೇ ಇದೆ. ಸೈಯದ್ ಯಾಸೀನ್ ಅವರನ್ನು ಸೋಲಿಸಿ ರಾಜಕೀಯವಾಗಿ ಮೂಲೆಗುಂಪು ಮಾಡಬೇಕೆಂಬ‌ ಕೆಲ ಕಾಂಗ್ರೆಸ್ಸಿಗರ ಪ್ರಯತ್ನ ಶಿವರಾಜ ಪಾಟೀಲ್ ಅವರಿಗೆ ದೊಡ್ಡ ಮಟ್ಟದಲ್ಲೇ ನೆರವಾಗಿದೆ.‌