ಗೃಹಲಕ್ಷ್ಮೀ ಫಲಾನುಭವಿಗಳ ಸಮಸ್ಯೆ ಇತ್ಯರ್ಥಕ್ಕೆ ಕ್ರಮ

ವಿಧಾನ ಪರಿಷತ್ (ವಿಧಾನಸೌಧ): ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂದು ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಿಲ್ಲ. ಈ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು ಉಳಿದವರ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ವಿಶೇಷ ಅಧಿವೇಶನದ ವಿಧಾನ ಪರಿಷತ್‌ ಕಲಾಪದಲ್ಲಿ ಸದಸ್ಯರಾದ ಪಿ.ಎಚ್‌.ಪೂಜಾರ‌ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಇಲಾಖೆಗಳ ದಾಖಲೆಯಲ್ಲೂ ಇದೇ ರೀತಿ ತೋರಿಸುತ್ತಿದ್ದು, ಇದರಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದು, ಸರ್ಕಾರದ ಹಾಗೂ ನಮ್ಮ ಇಲಾಖೆಯದ್ದು ಯಾವುದೇ ತಪ್ಪಿಲ್ಲ ಎಂದರು.

ರಾಜ್ಯದಲ್ಲಿ ಸುಮಾರು 1.26 ಕೋಟಿ ಫಲಾನುಭವಿಗಳಿದ್ದು, ಕೆಲ ಫಲಾನುಭವಿಗಳು ಕೆಲವೊಂದು ವ್ಯವಹಾರ ನಡೆಸುವಾಗ ಜಿಎಸ್‌ಟಿ, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಗೃಹಲಕ್ಷ್ಮೀಗಾಗಿಯೇ ನಿರ್ಮಿಸಲಾಗಿರುವ ಸಾಫ್ಟ್‌ ವೇರ್‌ನಲ್ಲಿ ಜಿಎಸ್‌ಟಿ, ಆದಾಯ ತೆರಿಗೆ ಅಂತ ತೋರಿಸಿದರೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಗೃಹಲಕ್ಷ್ಮೀ ಯೋಜನೆ ನಿರಂತರ ಪ್ರಕ್ರಿಯೆ, ಈಗಾಗಲೇ ಆದಾಯ ತೆರಿಗೆ ಜಿಎಸ್‌ಟಿ ಕೌನ್ಸಿಲ್‌ ಗಮನಕ್ಕೂ ತರಲಾಗಿದೆ ಎಂದರು.

ದ್ವೇಷ ಭಾಷಣ ಮಸೂದೆ ನೆನೆಗುದಿಗೆ ಬೀಳಿಸಲು ರಾಷ್ಟ್ರಪತಿಗೆ ವರ್ಗ

ಬೆಂಗಳೂರು: ದೇಶದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಜನ ಸಮುದಾಯ ಅನೇಕ ನಿರೀಕ್ಷೆಗಳನ್ನು ಮಾಡಿತ್ತು. ಎಲ್ಲ ಹುಸಿಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 9 ಬಜೆಟ್‌ಗಳಲ್ಲಿಇದು ಅತ್ಯಂತ ದುರ್ಬಲ ಬಜೆಟ್ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಜೆಟ್‌ಗಳಲ್ಲಿ ಕೃಷಿ, ಕೈಗಾರಿಕಾ ವಲಯಗಳಿಗೆ ಪ್ರಾತಿನಿಧ್ಯ ಕೊಡುತ್ತಿದ್ದರು. ಬಡತನ ನಿರ್ಮೂಲನೆಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನೀಡಿದ್ದರು. ಇಡೀ ಪ್ರಪಂಚದಲ್ಲಿ ಅಂತಹ ಕಾರ್ಯಕ್ರಮ ಯಾವ ದೇಶಗಳು ನೀಡಿರಲಿಲ್ಲ. ಅದೆಲ್ಲ ಗಾಳಿಗೆ ತೂರಿ, ಇಡೀ ದೇಶಕ್ಕೆ ನಿರಾಸೆ ಮಾಡಿದ್ದಾರೆ‌ ಎಂದು ಟೀಕಿಸಿದರು.

53.50 ಲಕ್ಷ ಕೋಟಿ ರೂ.ಗಳಲ್ಲಿ 16 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಇಷ್ಟೊಂದು ಸಾಲ‌ ಮಾಡಿಕೊಂಡು, ವಿಧಾನಸಭೆಯಲ್ಲಿ ನಮಗೆ ನೀತಿಪಾಠ ಹೇಳುತ್ತಾರೆ. ಅಷ್ಟೊಂದು ಸಾಲ‌ ಮಾಡಿಕೊಂಡು ಜನ ಸಮುದಾಯಕ್ಕೆ ಏನು ಕೊಟ್ಟಿದ್ದೀರ ಎಂದು ಪ್ರಶ್ನಿಸಿದ ಅವರು, ಕರ್ನಾಟಕಕ್ಕೆ ಏನು ನೀಡಿಲ್ಲ. ಹೇಳಿಕೊಳ್ಳುವಂತಹ ಒಂದೇ ಒಂದು  ಯೋಜನೆಯನ್ನೂ ನೀಡಿಲ್ಲ. ನೀರಾವರಿ, ಕೃಷಿ,‌ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಬೇಕಿತ್ತು. ಯಾವುದೇ ಯೋಜನೆಯನ್ನು ನೀಡದೇ ಇರುವುದನ್ನು ಬಜೆಟ್ ಅಂತ ಕರೆಯಬೇಕೆ ಎಂದರು.

ವಿಶ್ವದಲ್ಲಿ ಶಿಕ್ಷಣ ವಲಯ ಸಾಕಷ್ಟು ವೇಗವಾಗಿ ಬದಲಾವಣೆ ಕಾಣುತ್ತಿದೆ. ದೇಶದಲ್ಲಿ ಶಿಕ್ಷಣವನ್ನೇ ಹಿಂದೆ ತಳ್ಳಿದ್ದಾರೆ. ರಾಜ್ಯಕ್ಕೆ ಐಐಟಿ, ಏಮ್ಸ್ ಸಂಸ್ಥೆಗಳನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ, ಪ್ಲಾಸ್ಟಿಕ್, ಬೆಂಕಿ ಪಟ್ಟಣದ ಬೆಲೆ‌ ಕಡಿಮೆ ಮಾಡಿದ್ದಾರೆ. ಇದೊಂದು ನಿರಾಶಾದಾಯಕ ಬಜೆಟ್ ಎಂದು ಹೇಳಿದರು.

ದ್ವೇಷ ಭಾಷಣ ಮಸೂದೆಯಲ್ಲಿನ 28 ಅಂಶಗಳನ್ನು ರಾಜ್ಯಪಾಲರು ಪ್ರಶ್ನಿಸಿದ್ದಾರೆ. ಅದನ್ನು ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ. ಮುಂದೆ ಏನಾಗುತ್ತದೆ ನೋಡೋಣ. ರಾಷ್ಟ್ರಪತಿಗಳು ಪರಿಶೀಲಿಸಿ ವಾಪಸ್ ಕೊಟ್ಟರೆ, ಬದಲಾವಣೆ ಮಾಡಿ ಕಳಿಸಲಾಗುವುದು ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಏನು ಬೇಕಾದರೂ ಮಾತನಾಡಿದರೆ, ಅದರ ಪರಿಣಾಮ‌ ಸಮಾಜಕ್ಕೆ ಏನಾಗುತ್ತದೆ. ಸಮುದಾಯಗಳನ್ನು ದೂಷಣೆ ಮಾಡುವುದು, ವೈಯಕ್ತಿಕವಾಗಿ ಮಾತನಾಡುವುದು. ಆ ಮಾತುಗಳು ಸಮಾಜದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ದ್ವೇಷಭಾಷಣ ಮಸೂದೆ ತಂದಿದ್ದೇವೆ. ಕೆಲವು ಭಾಗಗಳಲ್ಲಿ, ಕೆಲವರು ಭಾಷಣಗಳನ್ನು ಮಾಡಿದ್ದಾರೆ. ಭಾಷಣ ಮಾಡಿದ ಮೇಲೆ ಏನಾಯಿತು ಎಂಬುದನ್ನು ಗಮನಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಬಿಲ್ ತಂದಿದ್ದೇವೆ. ಯಾರು ಏನು ಬೇಕಾದರು ಮಾತಾಡಬಹುದೇ? ಸಮಾಜದಲ್ಲಿ ಅಶಾಂತಿ ಉಂಟು‌ ಮಾಡಬಹುದೇ ಎಂದರು.

ರಾಜ್ಯಪಾಲರು ಉದ್ದೇಶಪೂರ್ವಕವಾಗಿ, ದ್ವೇಷ ಭಾಷಣ ಮಸೂದೆ ನೆನೆಗುದಿಗೆ ಬೀಳಬೇಕು. ಇದು ಜಾರಿಯಾಗಬಾರದು ಎಂಬ ಉದ್ದೇಶದಿಂದ  ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಉದ್ಯಮಿ ಸಿ.ಜೆ.ರಾಯ್ ಅತ್ಮಹತ್ಯೆ ಪ್ರಕರಣದಲ್ಲಿ
ಬೇರೆಬೇರೆ ರೀತಿಯಲ್ಲಿ ಊಹಾಪೋಹಾಗಳು ಆಗಬಾರದು ಎಂಬ ಕಾರಣದಿಂದ ಎಸ್‌ಐಟಿ ರಚನೆ ಮಾಡಿದ್ದೇವೆ. ಎಸ್‌ಐಟಿ ವರದಿ ಏನು ಬರುತ್ತದೆ ಗಮನಿಸೋಣ. ಯಾರ ಪಾತ್ರಗಳು ಏನಿದೆ ಎಂಬುದು ನೋಡಬೇಕಾಗುತ್ತದೆ ಎಂದು ಹೇಳಿದರು.