ಉದ್ಯಮಿ ಸಿ.ಜೆ.ರಾಯ್ ‘ಕಾನ್ಪಿಡೆಂಟ್’ ಕಳೆದುಕೊಂಡಿದ್ದು ಯಾಕೆ..?

ಬೆಂಗಳೂರು: ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಸಂದರ್ಭದಲ್ಲೇ  ಪಿಸ್ತೂಲ್‌ನಿಂದ ಎದೆಗೆ ಗುಂಡುಹಾರಿಸಿಕೊಂಡು ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಕಂಪನಿ ಮುಖ್ಯಸ್ಥ ಡಾ.ಸಿ.ಜೆ.ರಾಯ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಿಚ್ಮಡ್ ಟೌನ್‌ನಲ್ಲಿರುವ ಕಾನ್ಫಿಡೆಂಟ್ ಗ್ರೂಪ್‌ನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಪಿಸ್ತೂಲ್‌ನಿಂದ ರಾಯ್ ಗುಂಡು ಹಾರಿಸಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಅವರು ಕೊನೆಯುಸಿರೆಳೆದಿದ್ದಾರೆ.
ರಾಯ್, ಬೆಂಗಳೂರು, ಕೇರಳ, ತಮಿಳುನಾಡು ಸೇರಿದಂತೆ ದೇಶ-ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದರು. ಆದಾಯ ತೆರಿಗೆ ಅಧಿಕಾರಿಗಳು 2 ತಿಂಗಳಿಂದ ರಾಯ್ ಕುರಿತು ತನಿಖೆ ನಡೆಸಿದ್ದರು. ಕಳೆದ 3 ದಿನಗಳಿಂದ ಬೆಂಗಳೂರಿನ ಕಚೇರಿ ಮೇಲೆ ದಾಳಿ ನಡೆದಿತ್ತು. ಈ ವೇಳೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟಿವಿ ರಿಯಾಲಿಟಿ ಶೋಗಳ ವಿಜೇತರಿಗೆ ಬಹುಮಾನ ನೀಡುವ ಮೂಲಕ ರಾಯ್ ಜನರಿಗೆ ಚಿರಪರಿಚಿತರಾಗಿದ್ದರು. ಪೊಲೀಸ್ ತನಿಖೆಯಿಂದ ರಾಯ್ ಆತ್ಮಹತ್ಯೆಗೆ ಕಾರಣ ತಿಳಿಯಬೇಕಿದೆ.

ಇದು adjustment ದೋಸ್ತಿ..!?

 ಬಳ್ಳಾರಿ: ಮಾಜಿ ಸಚಿವ ಗಂಗಾವತಿ ಬಿಜೆಪಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಇದೀಗ ಬಳ್ಳಾರಿ ರಾಜಕೀಯದಲ್ಲಿ ತುಂಬಾ ಬಿಜಿಯಾಗಿದ್ದಾರೆ.

ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ನ್ಯಾಯಾಲಯದ ಅನುಮತಿ ದೊರೆತಾಗಲೇ ಜನಾರ್ಧನ ರೆಡ್ಡಿ ರಾಜಕೀಯ ಬಳ್ಳಾರಿಗೆ ಶಿಫ್ಟ್ ಆಗಿತ್ತು. ಬ್ಯಾನರ್ ಬಡಿದಾಟ, ಫೈರಿಂಗ್, ಜನಾರ್ಧನರೆಡ್ಡಿ ಅವರ ಬಳ್ಳಾರಿ ಕೇಂದ್ರಿತ ರಾಜಕೀಯಕ್ಕೆ ಪ್ರಬಲ ಅಸ್ತ್ರ ನೀಡಿದೆ.
ಜನಾರ್ಧನ ರೆಡ್ಡಿ ಅವರು ಮತ್ತೆ ಹಳೆಯ ಅಸ್ತ್ರವನ್ನೂ ಕೈಗೆತ್ತಿಕೊಂಡಿದ್ದಾರೆ, ಅದು ಬಿ ಶ್ರೀರಾಮುಲು. ಅಂದ ಹಾಗೇ ಜನಾರ್ಧನ ರೆಡ್ಡಿ ಅವರು ಸಾಕಷ್ಟು ಸಂದರ್ಶನಗಳಲ್ಲಿ ಶ್ರೀರಾಮುಲು ಅವರ ಬಾಲ್ಯ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ. ಜನಾರ್ಧನ ರೆಡ್ಡಿ ಅವರು ಶ್ರೀರಾಮುಲು ಅವರಿಗಿಂತ ವಯಸ್ಸಿನಲ್ಲಿ ಮೂರು ವರ್ಷ ದೊಡ್ಡವರು. ಕೇವಲ ಮೂರು ವರ್ಷ ಅಂತರದ ವಯಸ್ಸಿನವರು ಬಾಲ್ಯ ಹಾಗೂ ಆಪ್ತ ಸ್ನೇಹಿತರು ಆಗಬಾರದು ಎಂದೇನಿಲ್ಲ. ಆದರೆ, ಜನಾರ್ಧನ ರೆಡ್ಡಿ ಹಾಗೂ ಬಿ ಶ್ರೀರಾಮುಲು ನಡುವೆ ದೋಸ್ತಿ ಬೆಸೆದಿದ್ದು ಎನ್ನೋಬಲ್ ಇಂಡಿಯಾ ಎಂಬ ಸಂಸ್ಥೆ ಎಂಬುದು ಬಳ್ಳಾರಿ ಜನರ ಮಾತಾಗಿದೆ.
ಬಳ್ಳಾರಿ ಜನರು ಜನಾರ್ಧನ ರೆಡ್ಡಿ ಹೆಸರೇ ಕೇಳಿರದಿದ್ದ ಕಾಲದಲ್ಲಿ ಶ್ರೀರಾಮುಲು ಜನರಿಗೆ ಚಿರಪರಿಚಿತರಾಗಿದ್ದರು. ಜನಾರ್ಧನ ರೆಡ್ಡಿ ಅವರು ಎನ್ನೋಬಲ್ ಇಂಡಿಯಾ ಎಂಬ ಹಣಕಾಸಿನ ಸಂಸ್ಥೆ ಹೊಂದಿದ್ದರು. ಈ ಸಂಸ್ಥೆಗೆ ಬೆನ್ನೆಲುಬು ಆಗಿ ಜನಾರ್ಧನ ರೆಡ್ಡಿ ಅವರು ಶ್ರೀರಾಮುಲು ಅವರನ್ನು ಜೊತೆ ಮಾಡಿಕೊಂಡರು.
ಆ ಬಳಿಕ ಗಣಿಗಾರಿಕೆಗೆ ಸಂಬಂಧಿಸಿದಂತೆಯೂ ಒಂದು ಕಥೆ ಇದೆ. ಒಂದು ಗಣಿ ಕಂಪನಿ ತಕರಾರು ವಿಚಾರ ಅದಾಗಲೇ ಗಣಿಗಾರಿಕೆಯಲ್ಲಿದ್ದ ಆಮೇಲೆ ಶಾಸಕರು ಹಾಗೂ ರಾಜ್ಯಸಭಾ ಸದಸ್ಯರೂ ಆದ ಅನಿಲ್ ಲಾಡ್ ಅವರ ಬಳಿ ಬಂದಿತ್ತು.
ಈ ನ್ಯಾಯ ಬಗೆಹರಿಸಲು ಶ್ರೀರಾಮುಲು ಅವರ ಬಳಿ ಕಳಿಸಿದ್ದರು.ಆಗ ಶ್ರೀರಾಮುಲು ಈ ತಕರಾರನ್ನು ಜನಾರ್ಧನ ರೆಡ್ಡಿ ಅವರಿಗೆ ವಹಿಸಿದ್ದರು. ನ್ಯಾಯ ಬಗೆಹರಿಸುತ್ತಲೇ ಗಣಿ ಜನಾರ್ಧನ ರೆಡ್ಡಿ ಪಾಲಾಗಿತ್ತು.ಈ ಮೂಲಕ ಜನಾರ್ಧನ ರೆಡ್ಡಿ ಗಣಿಗಾರಿಕೆಗೆ ಬಂದರು.
ಇದಕ್ಕೆ ಪರ್ಯಾಯವಾಗಿ ಬಿ ಶ್ರೀರಾಮುಲು ರಾಜಕೀಯಕ್ಕೆ ಜನಾರ್ಧನ ರೆಡ್ಡಿ ಬೆನ್ನೆಲುಬು ಆಗಿ ನಿಂತರು. ಕಾಂಗ್ರೆಸ್ ನಿಂದ ನಗರಸಭೆ ಸದಸ್ಯರಾಗಿದ್ದ ಬಿ ಶ್ರೀರಾಮುಲು1999ರ ಚುನಾವಣೆ ಹೊತ್ತಿಗೆ  ಬಿಜೆಪಿಯಲ್ಲಿದ್ದರು. ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಬಳ್ಳಾರಿ ಲೋಕಸಭಾ ಕ್ಷೇತ್ರ ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಹಾಗೂ ಬಿಜೆಪಿಯ ಸುಷ್ಮಾ ಸ್ವರಾಜ್ ಸ್ಪರ್ಧೆಯಿಂದ ರಂಗೇರಿತ್ತು. ಆಗ ರಾಜಕೀಯವಾಗಿ ಅಂಬೆಗಾಲಿಡುತ್ತಿದ್ದ ಜನಾರ್ಧನ ರೆಡ್ಡಿ ಅವರು ಶ್ರೀರಾಮುಲು ಹಾಗೂ ಸುಷ್ಮಾ ಸ್ವರಾಜ್ ಪರ ಪ್ರಚಾರ ಕೈಗೊಂಡಿದ್ದರು. ಇಬ್ಬರೂ ಸೋತರೂ ಜನಾರ್ಧನ ರೆಡ್ಡಿ ಅವರಿಗೆ ಬಿಜೆಪಿಯಲ್ಲಿ ಪ್ರಬಲ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಅವರ ಸಂಪರ್ಕ ಸಿಕ್ಕಿತ್ತು. ಇತ್ತ ಗಣಿಗಾರಿಕೆಯೂ ಉತ್ತುಂಗದ ಹಾದಿ ಹಿಡಿದಿತ್ತು. ಎನ್ನೋಬಲ್ ಇಂಡಿಯಾ ತೆರೆಮರೆಗೆ ಸರಿದಿತ್ತು.
2004 ರಲ್ಲೂ ಲೋಕಸಭೆ ಹಾಗೂ ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆದಿತ್ತು. ಆಗ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಗಾಲಿ ಜನಾರ್ಧನ ರೆಡ್ಡಿ ಹಿರಿಯ ಸಹೋದರ ಗಾಲಿ ಕರುಣಾಕರ ರೆಡ್ಡಿ ಹಾಗೂ ವಿಧಾನಸಭೆಗೆ ಸ್ಪರ್ಧಿಸಿದ್ದ ಬಿ ಶ್ರೀರಾಮುಲು ಇಬ್ಬರೂ ಗೆದ್ದಿದ್ದರು. ಈ ಮೂಲಕ ಬಳ್ಳಾರಿಯಲ್ಲಿ ಕಮಲ ಅರಳಿಸಿದ್ದರು. ಆ ಬಳಿಕ ಜನಾರ್ಧನ ರೆಡ್ಡಿ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದರು. ವಿಧಾನ ಪರಿಷತ್ತಿನ ಸದಸ್ಯರೂ ಆದರು.  ಬಿ.ಶ್ರೀರಾಮುಲು ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.
2008 ಗಾಲಿ ಜನಾರ್ಧನ ರೆಡ್ಡಿ ಸಹೋದರರು ಹಾಗೂ ಬಿ ಶ್ರೀರಾಮುಲು ಅವರಿಗೆ ಸುವರ್ಣ ಯುಗವಾಗಿತ್ತು. ಜನಾರ್ಧನ ರೆಡ್ಡಿ ಹಾಗೂ ಅವರ ಸಹೋದರ ಗಾಲಿ ಕರುಣಾಕರ ರೆಡ್ಡಿ ಮಂತ್ರಿಯಾದರೆ ಮತ್ತೊಬ್ಬ ಸಹೋದರ ಗಾಲಿ ಸೋಮಶೇಖರ ರೆಡ್ಡಿ ಶಾಸಕರಾದರು ಆ ಬಳಿಕ ಕೆಎಂಎಫ್ ಅಧ್ಯಕ್ಷರಾದರು. ಬಿ ಶ್ರೀರಾಮುಲು ಮಂತ್ರಿಯಾದರೆ ಅವರ ಅಳಿಯ ಟಿ ಎಚ್ ಸುರೇಶ್ ಬಾಬು ಕಂಪ್ಲಿಯಿಂದ ಶಾಸಕರಾದರು.
2009 ರ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮುಲು ಸಹೋದರಿ ಜೆ ಶಾಂತಾ ಬಳ್ಳಾರಿಯಿಂದ ಹಾಗೂ ಸಹೋದರ ಎಸ್ ಪಕ್ಕೀರಪ್ಪ ರಾಯಚೂರಿನಿಂದ ಸಂಸದರಾದರು. ಜನಾರ್ಧನ ರೆಡ್ಡಿ ಅವರ ಹಣ ಬಲ ಹಾಗೂ ತಂತ್ರಗಾರಿಕೆಯೊಂದಿಗೆ ಶ್ರೀರಾಮುಲು ಅವರ ಜಾತಿಬಲವೂ ಸೇರಿಕೊಂಡು ಎರಡೂ ಕುಟುಂಬಗಳು ರಾಜಕೀಯವಾಗಿ ಬೆಳೆದವು.
2011ರ ವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಯುಕ್ತ ವರದಿ ಬಹಿರಂಗ, ಆ ಬಳಿಕ ಸಿಬಿಐದಿಂದ ಜನಾರ್ಧನ ರೆಡ್ಡಿ ಬಂಧನವಾಗಿದ್ದು ಈ ಎರಡೂ ಕುಟುಂಬಗಳ ರಾಜಕೀಯ ಸುವರ್ಣ ಯುಗ ಒಂದು ರೀತಿಯಲ್ಲಿ ಅಂತ್ಯಗೊಳ್ಳಲು ಕಾರಣವಾಯಿತು.
ಆ ಬಳಿಕ ಜನಾರ್ಧನ ರೆಡ್ಡಿ ಬೆಂಬಲದೊಂದಿಗೆ ಶ್ರೀರಾಮುಲು ಬಿ ಎಸ್ ಆರ್ ಕಾಂಗ್ರೆಸ್ ಸ್ಥಾಪಿಸಿ 2013ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದರು. ನಾಲ್ಕು ಜನ ಶಾಸಕರು ಆಯ್ಕೆಯಾಗಿ ಬಂದರು. ಗಾಲಿ ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ನಡುವೆ ಆಸ್ತಿಗೆ ಸಂಬಂಧಿಸಿದ ಹಗೆತನ ಕಂಡುಬಂದರೂ ಜನಾರ್ಧನ ರೆಡ್ಡಿ ಶ್ರೀರಾಮುಲು ಜೊತೆ ಬಿಟ್ಟಿರಲಿಲ್ಲ. 2015 ರಲ್ಲಿ ಜನಾರ್ಧನ ರೆಡ್ಡಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಬಳಿಕ ಬಿಜೆಪಿ ಸೇರ್ಪಡೆಯಾಗಲು ಸತತವಾಗಿ ಯತ್ನಿಸಿದರು. ಈ ಕುರಿತ ಪ್ರಯತ್ನಕ್ಕೆ ಶ್ರೀರಾಮುಲು ಪ್ರಯತ್ನ ಸಾಕಾಗಲಿಲ್ಲ ಎಂಬುದರಿಂದ ಶುರುವಾದ ಅಸಮಾಧಾನ 2023ರ ಚುನಾವಣೆ ಆಸುಪಾಸಿನಲ್ಲಿ ಭುಗಿಲೆದ್ದು ಮೊದಲ ಬಾರಿಗೆ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ವೈಯಕ್ತಿಕವಾಗಿ ಆರೋಪ ಪ್ರತ್ಯಾರೋಪ ಮಾಡಿಕೊಂಡರು. ಇದೀಗ ಜನಾರ್ಧನ ರೆಡ್ಡಿ ಅವರಿಗೆ ಬಳ್ಳಾರಿಯಲ್ಲಿ ರಾಜಕೀಯ ರಿ ಎಂಟ್ರಿ ಆಗಲು ಶ್ರೀರಾಮುಲು ಬೆಂಬಲ ಅಗತ್ಯವಾಗಿದೆ.
ಅದೇ ರೀತಿ ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಬಿ ಶ್ರೀರಾಮುಲು ಅವರಿಗೆ ಭವಿಷ್ಯದ ರಾಜಕೀಯ ದೃಷ್ಟಿಯಿಂದ ಜನಾರ್ಧನ ರೆಡ್ಡಿ ಬೆಂಬಲವೂ ಅಗತ್ಯವಾಗಿದೆ. ಅಲ್ಲಿಗೆ ಇಬ್ಬರೂ ಒಂದಾಗಲು ಬಳ್ಳಾರಿ ಘರ್ಷಣೆ ವೇದಿಕೆ ಒದಗಿಸಿದೆ. ಬಳ್ಳಾರಿಯಲ್ಲಿ ಮೊದಲಿನಂತೆ ಬಿಜೆಪಿಯ ಕಮಲ ಅರಳುವಲ್ಲಿ ಈ ಹೊಂದಾಣಿಕೆ ದೋಸ್ತಿ ಕಮಾಲ್ ಮಾಡುತ್ತಾ ನೋಡಬೇಕಿದೆ.
ಕೊನೆಯದಾಗಿ ಇನ್ನೊಂದು ವಿಚಾರ ಸಹೋದರರಂತೆ ಹಾಗೂ ಆಪ್ತ ಮಿತ್ರರಂತೆ ಇದ್ದರೂ ಶ್ರೀರಾಮುಲು ಜನಾರ್ಧನ ರೆಡ್ಡಿ ಅವರನ್ನು ಮೀರು ಎಂದು ಬಹುವಚನದಲ್ಲಿ ಮಾತನಾಡಿಸಿದರೆ ಜನಾರ್ಧನ ರೆಡ್ಡಿ ಮಾತ್ರ ನುವ್ವು ಎಂದು ಏಕವಚನದಲ್ಲಿ ಮಾತನಾಡುತ್ತಾರೆ.

 ನರೇಗಾ ಯೋಜನೆಗೆ ಬಿಜೆಪಿಯಿಂದ ಕೊಡಲಿ ಪೆಟ್ಟು

ಶಿವಮೊಗ್ಗ : ಶ್ರಮಜೀವಿಗಳಿಗೆ ಆಶ್ರಯವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಕೊಡಲಿ ಪೆಟ್ಟು ಹಾಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು.

ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಯೋಜನೆಯ ಸ್ವರೂಪ ಬದಲಿಸುವ ವೇಳೆ ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯಗಳ ಜೊತೆ ಚರ್ಚೆ ನಡೆಸಬೇಕಿತ್ತು ಎಂದರು.

ಸಂವಿಧಾನಬದ್ಧ ಹಕ್ಕನ್ನು ನರೇಗಾದಲ್ಲಿ ನೀಡಲಾಗಿತ್ತು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮನರೇಗಾ ಯೋಜನೆ ತೆಗೆದು ಜಿಬಿ ಜಿ ರಾಮ್ ಜಿ ಯೋಜನೆ ತರಲಾಗಿದೆ. ಉದ್ಯೋಗ ಖಾತ್ರಿಯಲ್ಲಿ ಗ್ರಾಮ ಪಂಚಾಯತಿಯವರು ತೆಗೆದುಕೊಳ್ಳುವ ನಿರ್ಣಯಗಳನ್ನು ಇದೀಗ ದೆಹಲಿಯಲ್ಲಿ ನಿರ್ಣಯ ಮಾಡಲಾಗುತ್ತಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ‌

ಉದ್ಯೋಗ ಖಾತ್ರಿಯಲ್ಲಿ ಆರು ಕೋಟಿ ಕುಟುಂಬದ ಪರವಾಗಿ ರಾಷ್ಟ್ರ ವ್ಯಾಪಿ ಆಂದೋಲನ, ಪ್ರತಿಭಟನೆ ಮಾಡುತ್ತಿದ್ದೇವೆ. ಹಣ ದುರುಪಯೋಗ ಆಗುತ್ತಿದ್ದರೆ ತಪ್ಪಿಸುವುದಾಗಿ ಹೇಳಿದ್ದು ತುಂಬಾ ಸಂತೋಷ, ಆದರೆ ಹಣ ದುರುಪಯೋಗ ತಿಳಿದುಕೊಳ್ಳಲು 12 ವರ್ಷ ಬೇಕಾಯಿತೇ ಎಂದು ಪ್ರಶ್ನಿಸಿದ ಸಚಿವರು, ಬಿಜಿಪಿಗರಿಗೆ ನಾಚಿಕೆ ಆಗಬೇಕು ಎಂದರು‌.

ಇನ್ನು ಬೆಳಗಾವಿ ಗಡಿ ಭಾಗ ಚೋರ್ಲ ಘಾಟ್ ನಲ್ಲಿ 2000 ರೂ ನೋಟ್ ಕಂತೆಯ 400 ಕೋಟಿ ಸಿಕ್ಕಿದೆ ಎನ್ನಲಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ಪೊಲೀಸರು ಚೆನ್ನಾಗಿ ತನಿಖೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಹಣ ಯಾರದ್ದು ಎಂದು ತಿಳಿಯಬೇಕು, ಗುಜರಾತ್ ನಿಂದ ಬಂದಿದೆ ಎನ್ನಲಾಗುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರು ಹೆಗಲುಮುಟ್ಟಿ ಯಾಕೆ ನೋಡಿಕೊಳ್ಳುತ್ತಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ. ಅದಾನಿ, ಅಂಬಾನಿಗೆ ದೇಶ ಬರೆದುಕೊಟ್ಟಿದ್ದಾರೆ. ಅವರ 23,000 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಕರ್ನಾಟಕದಲ್ಲಿ 40% ಭ್ರಷ್ಟಾಚಾರ ನಡೆಸಿದವರು, ಮುಖ್ಯಮಂತ್ರಿ ಜೈಲಿಗೆ ಹೋಗಿ ಬಂದಿದ್ದಾರೆ ಇವರಿಗೆ ನೈತಿಕತೆ ಇದೆಯಾ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಿಜೆಪಿ ವಿರುದ್ಧ ಕಿಡಿಕಾರಿದರು.

ಗೋವಾ ಸ್ವಾತಂತ್ರ್ಯ14 ವರ್ಷ ವಿಳಂಬ ಹಾಗೂ ಆಪರೇಷನ್ ವಿಜಯ್

ಭಾರತ 1947ರ ಆಗಸ್ಟ್ 15 ರಂದು ಬ್ರಿಟೀಷರ ದಾಸ್ಯದಿಂದ ಸ್ವತಂತ್ರಗೊಂಡಿತು. ಆದರೆ, ಹೈದರಾಬಾದ್, ಗುಜರಾತ್ ನ ಜುನಾಗಢ ಸಂಸ್ಥಾನ, ಗೋವಾ, ದಿಯು, ದಮನ್ ಪ್ರದೇಶದ ಜನರಿಗೆ ಸ್ವಾತಂತ್ರ್ಯ ಮರೀಚಿಕೆಯಾಗಿತ್ತು. ನವಾಬರ ಅಧಿಕಾರ ದಾಹ, ಪಾಕಿಸ್ತಾನ ಪರ ವ್ಯಾಮೋಹದಿಂದ ಹೈದರಾಬಾದ್, ಜುನಾಗಢ ವಿಮೋಚನೆ ಸಾಧ್ಯವಾಗಿರಲಿಲ್ಲ.‌ ಇನ್ನು ಗೋವಾ ಸೇರಿದಂತೆ ಕೆಲವು ಪ್ರದೇಶಗಳು ಪೋರ್ಚುಗೀಸರ ಆಡಳಿತಕ್ಕೆ ಒಳಪಟ್ಟಿದ್ದವು.
ಸ್ವತಂತ್ರ ಭಾರತದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ದಿಟ್ಟತನದಿಂದ ನಿಜಾಮನನ್ನು ಬಗ್ಗು ಬಡಿದು 1948ರ ಸೆ.17ರಂದು ಹೈದರಾಬಾದ್ ಸಂಸ್ಥಾನವನ್ನು ವಿಮೋಚನೆಗೊಳಿಸಿದ್ದರು. ಇದರಿಂದಾಗಿ ಕನ್ನಡದ ಪ್ರದೇಶಗಳಾದ ಬೀದರ್ ಹಾಗೂ ಅವಿಭಜಿತ ಗುಲ್ಬರ್ಗಾ, ರಾಯಚೂರು ಜಿಲ್ಲೆಗಳ ಜನರಿಗೂ ರಜಾಕರ ಕ್ರೌರ್ಯದಿಂದ ಮುಕ್ತಿ ಸಿಕ್ಕಿತ್ತು. ಅದೇ ರೀತಿ 1947ರ ಸೆಪ್ಟೆಂಬರ್‌ ನಲ್ಲಿ ಜುನಾಗಢ ನವಾಬನ ಆಡಳಿತದಿಂದ ವಿಮುಕ್ತಿಗೊಂಡರೂ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕೃತವಾಗಿ ಸೇರಿದ್ದು 1949ರ ಜೂನ್ 25ರಂದು.‌
ದೇಶಕ್ಕೆ ಬ್ರಿಟೀಷರಿಂದ ಸ್ವಾತಂತ್ರ್ಯ ಸಿಕ್ಕರೂ ಗೋವಾ, ದಿಯು, ದಮನ್ ಸೇರಿದಂತೆ ಕೆಲವು ಪ್ರದೇಶಗಳು ಪೋರ್ಚುಗೀಸರ ಆಡಳಿತಕ್ಕೆ ಒಳಪಟ್ಟಿದ್ದೇ ಕಗ್ಗಂಟಾಗಿತ್ತು. ಇದರಿಂದಾಗಿ ಈ ಪ್ರದೇಶದ ಜನರಿಗೆ ಸ್ವಾತಂತ್ರ್ಯ ಮರೀಚಿಕೆಯಾಗಿತ್ತು.  ಗೋವಾದಲ್ಲಿ ಪೋರ್ಚುಗಲ್ ಆಡಳಿತ ಅಂತ್ಯಗೊಂಡಿದ್ದು 1961ರ ಡಿಸೆಂಬರ್ 19ರಂದು.‌ ಅದರ ಹಿಂದೆ ಒಂದು ರೋಚಕ ಕಥೆಯೇ ಅಡಗಿದೆ.
ಬ್ರಿಟಿಷರ ವಿರುದ್ಧದ ದೇಶದಲ್ಲಿ ಚಳವಳಿ ತೀವ್ರಗೊಂಡಿದ್ದಾಗ ಗೋವಾ ಜನರು ಅಲ್ಲಿನ ಪೋರ್ಚುಗೀಸರ ಆಡಳಿತದ ವಿರುದ್ಧ ತಿರುಗಿಬಿದ್ದಿದ್ದರು. 1947ರಲ್ಲಿ ಭಾರತ ಸ್ವತಂತ್ರಗೊಂಡರೂ ಗೋವಾ ವಿಷಯದಲ್ಲಿ ಅಂದಿನ ಕೇಂದ್ರ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರಲಿಲ್ಲ. ರಾಜತಾಂತ್ರಿಕ ಕಾರಣಗಳಿಂದಾಗಿ ಹೈದರಾಬಾದ್ ಮತ್ತು ಜುನಾಗಢದಂತೆಯೇ ಗೋವಾಕ್ಕೆ ಭಾರತೀಯ ಸೇನೆ ನುಗ್ಗಿಸುವುದು ಸುಲಭವಾಗಿರಲಿಲ್ಲ. ಅಮೆರಿಕಾ ಪೋರ್ಚುಗೀಸರ ಬೆಂಬಲಕ್ಕೆ ಇದ್ದಿದ್ದು ಮತ್ತಷ್ಟು ಕಗ್ಗಂಟಾಗಿತ್ತು. ಬ್ರಿಟೀಷರೇನೋ ಭಾರತಕ್ಕೆ ಸ್ವತಂತ್ರ ನೀಡಿ ಇಂಗ್ಲೆಂಡ್ ಗೆ ತೆರಳಿದರು. ಬ್ರಿಟೀಷರಂತೆ ಪೋರ್ಚುಗೀಸರು ಗೋವಾ, ದಿಯು, ದಮನ್ ಬಿಟ್ಟುಕೊಡಲು ಸಿದ್ಧರಿರಲಿಲ್ಲ.
ಅಂತರರಾಷ್ಟ್ರೀಯ ಸಂಬಂಧಗಳ ನಿರ್ವಹಣೆಗೆ ಯುದ್ಧದ ಬದಲಿಗೆ ಮಾತುಕತೆ ಸೂಕ್ತ ಎಂಬುದು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಪ್ರತಿಪಾದನೆಯಾಗಿತ್ತು. ಆದರೆ, ದೇಶದ ಜನರು ಸುಮ್ಮನಿರಲಿಲ್ಲ. ದೇಶದ ವಿವಿಧ ಭಾಗಗಳ ಸಾವಿರಾರು ಜನರು ಗೋವಾಕ್ಕೆ ಹೋಗಿ ವಿಮೋಚನೆಯ ಆಂದೋಲನದಲ್ಲಿ ಭಾಗಿಯಾದರು. ಧರಣಿ ನಿರತರ ಮೇಲೆ ಪೋರ್ಚುಗಲ್ ಆಡಳಿತ ಗುಂಡಿನ ದಾಳಿ ನಡೆಸಿದ್ದರಿಂದ 32 ಜನರು ಮೃತಪಟ್ಟರು. ಇದರಿಂದಾಗಿ ಸೂಕ್ತ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಿತು.
1962ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಬಾಂಬೆ ಪ್ರದೇಶದಲ್ಲಿ ಗೋವಾ ಮೂಲದ ಜನ ಇದ್ದರು ಮತ್ತು ಅವರು ಗೋವಾ ವಿಮೋಚನೆಗೆ ಆಗ್ರಹಿಸುತ್ತಿದ್ದರು. ಸೇನಾ ಕಾರ್ಯಾಚರಣೆಗೆ ಸಮ್ಮತಿಸುವಂತೆ ನೆಹರೂ ಅವರ ಮೇಲೆ ಮೆನನ್ ಒತ್ತಡ ಹೇರಲಾರಂಭಿಸಿದರು. ಈ ಕುರಿತು ಸ್ವತಃ ನೆಹರೂ ಅವರ ತಂಗಿ ವಿಜಯಲಕ್ಷ್ಮಿ ಪಂಡಿತ್ ಅವರು ಬ್ರಿಟಿಷ್ ಅಧಿಕಾರಿ ಗೋರ್-ಬೂತ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸೇನಾ ಕಾರ್ಯಾಚರಣೆಯ ಕುರಿತು ಭಾರತ ಯೋಚಿಸತೊಡಗಿದಾಗ ಅಮೆರಿಕದ ಭಾರತ ರಾಯಭಾರಿಯು ವಿಶ್ವಸಂಸ್ಥೆಗೆ ಹೋಗುವಂತೆ ನೆಹರೂ ಅವರಿಗೆ ಸಲಹೆ ನೀಡಿದ್ದರು. ಕಾಶ್ಮೀರದ ವಿಷಯದಲ್ಲಿ ವಿಶ್ವಸಂಸ್ಥೆಗೆ ಹೋದದ್ದೇ ತಪ್ಪಾಯಿತು ಎಂದು ಅರಿತಿದ್ದ ನೆಹರೂ, ವಿಶ್ವಸಂಸ್ಥೆಗೆ ಗೋವಾದ ವಿಷಯವನ್ನು ಕೊಂಡೊಯ್ಯುವ ತಪ್ಪು ಮಾಡಲಿಲ್ಲ. ಈ ಹೊತ್ತಿಗೆ ಅಮೆರಿಕದ ಅಧ್ಯಕ್ಷರು ಬದಲಾದರು. ನೂತನ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಬಂದಿದ್ದ ಜಾನ್ ಎಫ್. ಕೆನಡಿ, ಪೋರ್ಚುಗಲ್ ವಸಾಹತುಶಾಹಿ ಮನಃಸ್ಥಿತಿ ಬಿಡಬೇಕು ಎಂಬ ನಿಲುವು ಹೊಂದಿದ್ದರು. ಜಾಗತಿಕ ಬೆಳವಣಿಗೆಗಳಿಂದಾಗಿ ರಾಜತಾಂತ್ರಿಕವಾಗಿ ಕಾಲ ಪಕ್ವಗೊಂಡಿತ್ತು ಮತ್ತು 62ರ ಚುನಾವಣೆ ಗೆಲ್ಲಲೇಬೇಕೆಂಬ ರಾಜಕೀಯ ಸ್ವಾರ್ಥವೂ ಸೇರಿದಾಗ, ಗೋವಾ ವಿಮೋಚನೆಗೆ ಕಾಲ ಕೂಡಿಬಂತು.
1961ರ ಡಿಸೆಂಬರ್ 17ರಂದು ಭಾರತದ ಸೇನೆ ಗೋವಾ ವಶಕ್ಕೆ ಮುಂದಡಿಯಿಟ್ಟಿತು. ಸಾವಂತವಾಡಿ, ಕಾರವಾರ ಮತ್ತು ಬೆಳಗಾವಿಯ ಭಾಗದಿಂದ ಭಾರತದ ಸೇನೆ ಗೋವಾ ಪ್ರವೇಶಿಸಿತು. ಯುದ್ಧಸಾಮಗ್ರಿಗಳನ್ನು ಹೊತ್ತು ತರುತ್ತಿದ್ದ ಪೋರ್ಚುಗಲ್ ಯುದ್ಧನೌಕೆಗೆ ಗಿಬ್ರಾಲ್ಟರ್ ಮೂಲಕ ಹಾದುಹೋಗಲು ಇಂಗ್ಲೆಂಡ್ ಅನುಮತಿಸಿತ್ತು. ಆದರೆ ಸುಯೇಜ್ ಕಾಲುವೆ ಮೂಲಕ ಹಾದುಬರುವಾಗ ಅದನ್ನು ಈಜಿಪ್ಟ್ ಅಧ್ಯಕ್ಷ ನಾಸರ್ ತಡೆದರು. ನಾಸರ್ ಜೊತೆಗಿನ ನೆಹರೂ ಗೆಳೆತನ ಕೆಲಸ ಮಾಡಿತ್ತು. 14 ವರ್ಷಗಳ ಕ್ಲಿಷ್ಟ ಸಮಸ್ಯೆಯನ್ನು ನಮ್ಮ ಸೇನೆ ಕೇವಲ 26 ಗಂಟೆಗಳ ಅವಧಿಯಲ್ಲಿ ಪರಿಹರಿಸಿತ್ತು. ‘ಆಪರೇಷನ್ ವಿಜಯ್’ ಕಾರ್ಯಾಚರಣೆಯು 450 ವರ್ಷಗಳ ಪೋರ್ಚುಗಲ್ ಆಡಳಿತದಿಂದ ಗೋವಾ, ದಮನ್-ದಿಯುಗಳನ್ನು ಮುಕ್ತಗೊಳಿಸಿತ್ತು. ಸೇನೆಯ ಯಶಸ್ಸು 1962ರ ಚುನಾವಣೆಯಲ್ಲಿ ಮೆನನ್ ಅವರ ಗೆಲುವಿಗೆ ಸಹಕಾರಿಯಾಯಿತು.