ಬಳ್ಳಾರಿ: ಮಾಜಿ ಸಚಿವ ಗಂಗಾವತಿ ಬಿಜೆಪಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಇದೀಗ ಬಳ್ಳಾರಿ ರಾಜಕೀಯದಲ್ಲಿ ತುಂಬಾ ಬಿಜಿಯಾಗಿದ್ದಾರೆ.
ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ನ್ಯಾಯಾಲಯದ ಅನುಮತಿ ದೊರೆತಾಗಲೇ ಜನಾರ್ಧನ ರೆಡ್ಡಿ ರಾಜಕೀಯ ಬಳ್ಳಾರಿಗೆ ಶಿಫ್ಟ್ ಆಗಿತ್ತು. ಬ್ಯಾನರ್ ಬಡಿದಾಟ, ಫೈರಿಂಗ್, ಜನಾರ್ಧನರೆಡ್ಡಿ ಅವರ ಬಳ್ಳಾರಿ ಕೇಂದ್ರಿತ ರಾಜಕೀಯಕ್ಕೆ ಪ್ರಬಲ ಅಸ್ತ್ರ ನೀಡಿದೆ.
ಜನಾರ್ಧನ ರೆಡ್ಡಿ ಅವರು ಮತ್ತೆ ಹಳೆಯ ಅಸ್ತ್ರವನ್ನೂ ಕೈಗೆತ್ತಿಕೊಂಡಿದ್ದಾರೆ, ಅದು ಬಿ ಶ್ರೀರಾಮುಲು. ಅಂದ ಹಾಗೇ ಜನಾರ್ಧನ ರೆಡ್ಡಿ ಅವರು ಸಾಕಷ್ಟು ಸಂದರ್ಶನಗಳಲ್ಲಿ ಶ್ರೀರಾಮುಲು ಅವರ ಬಾಲ್ಯ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ. ಜನಾರ್ಧನ ರೆಡ್ಡಿ ಅವರು ಶ್ರೀರಾಮುಲು ಅವರಿಗಿಂತ ವಯಸ್ಸಿನಲ್ಲಿ ಮೂರು ವರ್ಷ ದೊಡ್ಡವರು. ಕೇವಲ ಮೂರು ವರ್ಷ ಅಂತರದ ವಯಸ್ಸಿನವರು ಬಾಲ್ಯ ಹಾಗೂ ಆಪ್ತ ಸ್ನೇಹಿತರು ಆಗಬಾರದು ಎಂದೇನಿಲ್ಲ. ಆದರೆ, ಜನಾರ್ಧನ ರೆಡ್ಡಿ ಹಾಗೂ ಬಿ ಶ್ರೀರಾಮುಲು ನಡುವೆ ದೋಸ್ತಿ ಬೆಸೆದಿದ್ದು ಎನ್ನೋಬಲ್ ಇಂಡಿಯಾ ಎಂಬ ಸಂಸ್ಥೆ ಎಂಬುದು ಬಳ್ಳಾರಿ ಜನರ ಮಾತಾಗಿದೆ.
ಬಳ್ಳಾರಿ ಜನರು ಜನಾರ್ಧನ ರೆಡ್ಡಿ ಹೆಸರೇ ಕೇಳಿರದಿದ್ದ ಕಾಲದಲ್ಲಿ ಶ್ರೀರಾಮುಲು ಜನರಿಗೆ ಚಿರಪರಿಚಿತರಾಗಿದ್ದರು. ಜನಾರ್ಧನ ರೆಡ್ಡಿ ಅವರು ಎನ್ನೋಬಲ್ ಇಂಡಿಯಾ ಎಂಬ ಹಣಕಾಸಿನ ಸಂಸ್ಥೆ ಹೊಂದಿದ್ದರು. ಈ ಸಂಸ್ಥೆಗೆ ಬೆನ್ನೆಲುಬು ಆಗಿ ಜನಾರ್ಧನ ರೆಡ್ಡಿ ಅವರು ಶ್ರೀರಾಮುಲು ಅವರನ್ನು ಜೊತೆ ಮಾಡಿಕೊಂಡರು.
ಆ ಬಳಿಕ ಗಣಿಗಾರಿಕೆಗೆ ಸಂಬಂಧಿಸಿದಂತೆಯೂ ಒಂದು ಕಥೆ ಇದೆ. ಒಂದು ಗಣಿ ಕಂಪನಿ ತಕರಾರು ವಿಚಾರ ಅದಾಗಲೇ ಗಣಿಗಾರಿಕೆಯಲ್ಲಿದ್ದ ಆಮೇಲೆ ಶಾಸಕರು ಹಾಗೂ ರಾಜ್ಯಸಭಾ ಸದಸ್ಯರೂ ಆದ ಅನಿಲ್ ಲಾಡ್ ಅವರ ಬಳಿ ಬಂದಿತ್ತು.
ಈ ನ್ಯಾಯ ಬಗೆಹರಿಸಲು ಶ್ರೀರಾಮುಲು ಅವರ ಬಳಿ ಕಳಿಸಿದ್ದರು.ಆಗ ಶ್ರೀರಾಮುಲು ಈ ತಕರಾರನ್ನು ಜನಾರ್ಧನ ರೆಡ್ಡಿ ಅವರಿಗೆ ವಹಿಸಿದ್ದರು. ನ್ಯಾಯ ಬಗೆಹರಿಸುತ್ತಲೇ ಗಣಿ ಜನಾರ್ಧನ ರೆಡ್ಡಿ ಪಾಲಾಗಿತ್ತು.ಈ ಮೂಲಕ ಜನಾರ್ಧನ ರೆಡ್ಡಿ ಗಣಿಗಾರಿಕೆಗೆ ಬಂದರು.
ಇದಕ್ಕೆ ಪರ್ಯಾಯವಾಗಿ ಬಿ ಶ್ರೀರಾಮುಲು ರಾಜಕೀಯಕ್ಕೆ ಜನಾರ್ಧನ ರೆಡ್ಡಿ ಬೆನ್ನೆಲುಬು ಆಗಿ ನಿಂತರು. ಕಾಂಗ್ರೆಸ್ ನಿಂದ ನಗರಸಭೆ ಸದಸ್ಯರಾಗಿದ್ದ ಬಿ ಶ್ರೀರಾಮುಲು1999ರ ಚುನಾವಣೆ ಹೊತ್ತಿಗೆ ಬಿಜೆಪಿಯಲ್ಲಿದ್ದರು. ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಬಳ್ಳಾರಿ ಲೋಕಸಭಾ ಕ್ಷೇತ್ರ ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಹಾಗೂ ಬಿಜೆಪಿಯ ಸುಷ್ಮಾ ಸ್ವರಾಜ್ ಸ್ಪರ್ಧೆಯಿಂದ ರಂಗೇರಿತ್ತು. ಆಗ ರಾಜಕೀಯವಾಗಿ ಅಂಬೆಗಾಲಿಡುತ್ತಿದ್ದ ಜನಾರ್ಧನ ರೆಡ್ಡಿ ಅವರು ಶ್ರೀರಾಮುಲು ಹಾಗೂ ಸುಷ್ಮಾ ಸ್ವರಾಜ್ ಪರ ಪ್ರಚಾರ ಕೈಗೊಂಡಿದ್ದರು. ಇಬ್ಬರೂ ಸೋತರೂ ಜನಾರ್ಧನ ರೆಡ್ಡಿ ಅವರಿಗೆ ಬಿಜೆಪಿಯಲ್ಲಿ ಪ್ರಬಲ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಅವರ ಸಂಪರ್ಕ ಸಿಕ್ಕಿತ್ತು. ಇತ್ತ ಗಣಿಗಾರಿಕೆಯೂ ಉತ್ತುಂಗದ ಹಾದಿ ಹಿಡಿದಿತ್ತು. ಎನ್ನೋಬಲ್ ಇಂಡಿಯಾ ತೆರೆಮರೆಗೆ ಸರಿದಿತ್ತು.
2004 ರಲ್ಲೂ ಲೋಕಸಭೆ ಹಾಗೂ ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆದಿತ್ತು. ಆಗ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಗಾಲಿ ಜನಾರ್ಧನ ರೆಡ್ಡಿ ಹಿರಿಯ ಸಹೋದರ ಗಾಲಿ ಕರುಣಾಕರ ರೆಡ್ಡಿ ಹಾಗೂ ವಿಧಾನಸಭೆಗೆ ಸ್ಪರ್ಧಿಸಿದ್ದ ಬಿ ಶ್ರೀರಾಮುಲು ಇಬ್ಬರೂ ಗೆದ್ದಿದ್ದರು. ಈ ಮೂಲಕ ಬಳ್ಳಾರಿಯಲ್ಲಿ ಕಮಲ ಅರಳಿಸಿದ್ದರು. ಆ ಬಳಿಕ ಜನಾರ್ಧನ ರೆಡ್ಡಿ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದರು. ವಿಧಾನ ಪರಿಷತ್ತಿನ ಸದಸ್ಯರೂ ಆದರು. ಬಿ.ಶ್ರೀರಾಮುಲು ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.
2008 ಗಾಲಿ ಜನಾರ್ಧನ ರೆಡ್ಡಿ ಸಹೋದರರು ಹಾಗೂ ಬಿ ಶ್ರೀರಾಮುಲು ಅವರಿಗೆ ಸುವರ್ಣ ಯುಗವಾಗಿತ್ತು. ಜನಾರ್ಧನ ರೆಡ್ಡಿ ಹಾಗೂ ಅವರ ಸಹೋದರ ಗಾಲಿ ಕರುಣಾಕರ ರೆಡ್ಡಿ ಮಂತ್ರಿಯಾದರೆ ಮತ್ತೊಬ್ಬ ಸಹೋದರ ಗಾಲಿ ಸೋಮಶೇಖರ ರೆಡ್ಡಿ ಶಾಸಕರಾದರು ಆ ಬಳಿಕ ಕೆಎಂಎಫ್ ಅಧ್ಯಕ್ಷರಾದರು. ಬಿ ಶ್ರೀರಾಮುಲು ಮಂತ್ರಿಯಾದರೆ ಅವರ ಅಳಿಯ ಟಿ ಎಚ್ ಸುರೇಶ್ ಬಾಬು ಕಂಪ್ಲಿಯಿಂದ ಶಾಸಕರಾದರು.
2009 ರ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮುಲು ಸಹೋದರಿ ಜೆ ಶಾಂತಾ ಬಳ್ಳಾರಿಯಿಂದ ಹಾಗೂ ಸಹೋದರ ಎಸ್ ಪಕ್ಕೀರಪ್ಪ ರಾಯಚೂರಿನಿಂದ ಸಂಸದರಾದರು. ಜನಾರ್ಧನ ರೆಡ್ಡಿ ಅವರ ಹಣ ಬಲ ಹಾಗೂ ತಂತ್ರಗಾರಿಕೆಯೊಂದಿಗೆ ಶ್ರೀರಾಮುಲು ಅವರ ಜಾತಿಬಲವೂ ಸೇರಿಕೊಂಡು ಎರಡೂ ಕುಟುಂಬಗಳು ರಾಜಕೀಯವಾಗಿ ಬೆಳೆದವು.
2011ರ ವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಯುಕ್ತ ವರದಿ ಬಹಿರಂಗ, ಆ ಬಳಿಕ ಸಿಬಿಐದಿಂದ ಜನಾರ್ಧನ ರೆಡ್ಡಿ ಬಂಧನವಾಗಿದ್ದು ಈ ಎರಡೂ ಕುಟುಂಬಗಳ ರಾಜಕೀಯ ಸುವರ್ಣ ಯುಗ ಒಂದು ರೀತಿಯಲ್ಲಿ ಅಂತ್ಯಗೊಳ್ಳಲು ಕಾರಣವಾಯಿತು.
ಆ ಬಳಿಕ ಜನಾರ್ಧನ ರೆಡ್ಡಿ ಬೆಂಬಲದೊಂದಿಗೆ ಶ್ರೀರಾಮುಲು ಬಿ ಎಸ್ ಆರ್ ಕಾಂಗ್ರೆಸ್ ಸ್ಥಾಪಿಸಿ 2013ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದರು. ನಾಲ್ಕು ಜನ ಶಾಸಕರು ಆಯ್ಕೆಯಾಗಿ ಬಂದರು. ಗಾಲಿ ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ನಡುವೆ ಆಸ್ತಿಗೆ ಸಂಬಂಧಿಸಿದ ಹಗೆತನ ಕಂಡುಬಂದರೂ ಜನಾರ್ಧನ ರೆಡ್ಡಿ ಶ್ರೀರಾಮುಲು ಜೊತೆ ಬಿಟ್ಟಿರಲಿಲ್ಲ. 2015 ರಲ್ಲಿ ಜನಾರ್ಧನ ರೆಡ್ಡಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಬಳಿಕ ಬಿಜೆಪಿ ಸೇರ್ಪಡೆಯಾಗಲು ಸತತವಾಗಿ ಯತ್ನಿಸಿದರು. ಈ ಕುರಿತ ಪ್ರಯತ್ನಕ್ಕೆ ಶ್ರೀರಾಮುಲು ಪ್ರಯತ್ನ ಸಾಕಾಗಲಿಲ್ಲ ಎಂಬುದರಿಂದ ಶುರುವಾದ ಅಸಮಾಧಾನ 2023ರ ಚುನಾವಣೆ ಆಸುಪಾಸಿನಲ್ಲಿ ಭುಗಿಲೆದ್ದು ಮೊದಲ ಬಾರಿಗೆ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ವೈಯಕ್ತಿಕವಾಗಿ ಆರೋಪ ಪ್ರತ್ಯಾರೋಪ ಮಾಡಿಕೊಂಡರು. ಇದೀಗ ಜನಾರ್ಧನ ರೆಡ್ಡಿ ಅವರಿಗೆ ಬಳ್ಳಾರಿಯಲ್ಲಿ ರಾಜಕೀಯ ರಿ ಎಂಟ್ರಿ ಆಗಲು ಶ್ರೀರಾಮುಲು ಬೆಂಬಲ ಅಗತ್ಯವಾಗಿದೆ.
ಅದೇ ರೀತಿ ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಬಿ ಶ್ರೀರಾಮುಲು ಅವರಿಗೆ ಭವಿಷ್ಯದ ರಾಜಕೀಯ ದೃಷ್ಟಿಯಿಂದ ಜನಾರ್ಧನ ರೆಡ್ಡಿ ಬೆಂಬಲವೂ ಅಗತ್ಯವಾಗಿದೆ. ಅಲ್ಲಿಗೆ ಇಬ್ಬರೂ ಒಂದಾಗಲು ಬಳ್ಳಾರಿ ಘರ್ಷಣೆ ವೇದಿಕೆ ಒದಗಿಸಿದೆ. ಬಳ್ಳಾರಿಯಲ್ಲಿ ಮೊದಲಿನಂತೆ ಬಿಜೆಪಿಯ ಕಮಲ ಅರಳುವಲ್ಲಿ ಈ ಹೊಂದಾಣಿಕೆ ದೋಸ್ತಿ ಕಮಾಲ್ ಮಾಡುತ್ತಾ ನೋಡಬೇಕಿದೆ.
ಕೊನೆಯದಾಗಿ ಇನ್ನೊಂದು ವಿಚಾರ ಸಹೋದರರಂತೆ ಹಾಗೂ ಆಪ್ತ ಮಿತ್ರರಂತೆ ಇದ್ದರೂ ಶ್ರೀರಾಮುಲು ಜನಾರ್ಧನ ರೆಡ್ಡಿ ಅವರನ್ನು ಮೀರು ಎಂದು ಬಹುವಚನದಲ್ಲಿ ಮಾತನಾಡಿಸಿದರೆ ಜನಾರ್ಧನ ರೆಡ್ಡಿ ಮಾತ್ರ ನುವ್ವು ಎಂದು ಏಕವಚನದಲ್ಲಿ ಮಾತನಾಡುತ್ತಾರೆ.